Friday, July 22, 2016

ಮಾದಿರ ಗಾದೆಗಳು ಮತ್ತು ಭತ್ತದ ಬೇಸಾಯ


ಆಟಿ ತಿಂಗಳಲ್ಲಿ ಊರು ಸುತ್ತುವ ಮಾದಿರನರ್ತನದಲ್ಲಿ ಮಾದಿರ ಗಾದೆಗಳನ್ನು ಹಾಡುತ್ತಾ ಹೇಳುತ್ತಾರೆ. ತೆಂಬೆರೆ ನುಡಿಸುವವಳು ಹಾಡುವ ಪಲ್ಲವಿಯನ್ನು ನರ್ತಕಿಯು ಪುನರಾವರ್ತಿಸುತ್ತಾಳೆ. ಇವರ ಗಾದೆಗಳಲ್ಲಿ ತುಳುನಾಡಿನ ಮಣ್ಣಿನ ಕೃಷಿ ಸಂಸ್ಕøತಿಯ ಗುಣ ಇದೆ; ಮಳೆ ಬೆಳೆಯ ಚಿತ್ರಣ ಇದೆ. ಉದಾಹರಣೆಗೆ ಕೆಲವು ಗಾದೆಗಳು ಇಲ್ಲಿವೆ.
1 ಪಗ್ಗು ತಿಂಗಳ ಹದಿನೆಂಟು ಸಲುವಂದು ಗದ್ದೆಯಲ್ಲೊಮ್ಮೆ ಕಟ್ಟಬೇಕಂತೆ
(ಕೋಣ) ಮೂಲೆಯಲ್ಲಿ ಕೈ ಬಿತ್ತು ಹಾಕಿ ನೇಜಿ ಹಾಕಬೇಕು ಮಾದಿರ
2 ಸುಗ್ಗಿಯಲ್ಲಿ ಬೆಳೆಯು ಅತಿಕಾರೆ ಸತ್ಯ ಎನ್ನುವರು ಮಾದಿರ
ಸುಗ್ಗಿ ಅಲ್ಲದೆ ಬೇರೆ ಬೆಳೆಗೆ ಬೆಳೆಯಬಾರದು ಮಾದಿರ
3 ಬೆಳೆಯ ಲಕ್ಷಣ ನೇಜಿಯಲ್ಲಿದೆ, ಬತ್ತದ ಲಕ್ಷಣ ಬೆಳೆಯಲ್ಲಿದೆ
ರೈತನ ಲಕ್ಷಣ ಕಣಜದಲ್ಲಿಲ್ಲವೇ ಮಾದಿರ?
4 ಆಟಿಯಲ್ಲಿ ಮಳೆ ಬಂದರೆ ಅಟ್ಟ ಮುರಿಯಬಹುದು (ಉಪ್ಪರಿಗೆ) ಮಾದಿರ
ಸೋಣದಲ್ಲಿ ಮಳೆ ಬಂದರೆ ಸೊಂಟ ಮುರಿಯ ಬಹುದು ಮಾದಿರ
5   ಸಮ ತಟ್ಟಿಗೆ ಬಾರದೆ ಕೋಣಗಳಿಗೆ ಹಲಗೆ ಇಡಬಾರದು
ಹಲ್ಲು ಬಾರದ ಕರುಗಳನ್ನು ಒಣ ಬೇಸಾಯಕ್ಕೆ ಉಳಬಾರದು ಮಾದಿರ
6 ಹತ್ತನಾಜೆಗೆ ಹತ್ತು ಹನಿ ಮಳೆ ಇದೆಯಂತೆ ಕೇಳಿದೆಯಾ
ಪೂಜೆ ಬಲಿ ಹೊರಗಿನಿಂದ ಒಳಗೆ ಸೇರುತ್ತದೆ ಮಾದಿರ
7 ನೀರು ಇಲ್ಲದ ಕೆರೆ ಅಲ್ಲ ಬೆಳೆ ಆಗದ ಗದ್ದೆ ಅಲ್ಲ
ಬೈಹುಲ್ಲು ಇಲ್ಲದ ಕಾಲದಲ್ಲಿ ಕೋಣಗಳಿಲ್ಲ ಕೇಳಿದೆಯಾ ಮಾದಿರ
8 ನೀರು ಇರುವÀ ಬೈಲಿನಲ್ಲಿ ನಿಧಿ ಇದೆ ಕೇಳಿದೆಯಾ
ನೀರು ಇಲ್ಲದ ಊರಿನಿಂದ ಓಡುವುದೊಳಿತು ಮಾದಿರ
9 ಕಾಡು ಕರೆ ಗದ್ದೆ ಕಲ ನೀರು ನಿಧಿ ಸಾಲದು
ಭೂಮಿ ಜನ ಕೋಣ ಬೀಜ ಎಲ್ಲ ಬೇಕು ಮಾದಿರ
10 ದೂರ ಇರುವ ಬೈಲಿಗಿಂತ ಹತ್ತಿರ ಇರುವ ಬೆಟ್ಟು ಒಳ್ಳೆಯದು
  ಹರಿವ ನೀರಿನ ಗದ್ದೆ ಇದ್ದರೆ ಬಾರಿ ಚೆನ್ನ ಮಾದಿರ
11 ಕಾಡಿನ ನೀರಿನ ಬಳಿಯ ಗದ್ದೆ ಅಲ್ಲ;
ತೋಡಿನ ನೀರಿನ ಬಳಿಯ ಮನೆ ಅಲ್ಲ
ತಲೆನೀರು (ಕೆರೆ) ಇಲ್ಲದ ಬೆಟ್ಟಲ್ಲ ಹೇಳುವರಲ್ಲ ಮಾದಿರ
12 ಭತ್ತ ಇದ್ದರೆ (ತೆನೆ) ಬಾಗುತ್ತದೆ. ಜೊಳ್ಳು ಆದರೆ ನೆಟ್ಟಗೆ ನಿಲ್ಲುತ್ತದೆ.
ಪೈರಿಗಿಂತ ಎತ್ತರ ಕಳೆ; ಏನು ಹೇಳಲಿ ಮಾದಿರ ?
13 ಹಸುಗಳು ಇಳಿದ ಗದ್ದೆಯಲ್ಲಿ ಹುಲ್ಲು ಅದರೂ ಉಳಿಯುತ್ತದೆಯಂತೆ
ಕೋಳಿ ಇಳಿವ ಗದ್ದೆಯಲ್ಲಿ ಹುಲ್ಲು ಸಿಗದು ಮಾದಿರ
14 ಹೆಚ್ಚು ದಿನ ನೆರೆ ಕೂತರೆ ಬೆಳೆ ಕೊಳೆಯಬಹುದು ಮಾದಿರ
ನೆರೆ ಇಲ್ಲದೆ ಹೋದರೆ ಪಟ್ಲ ಗದ್ದೆಗೆ ಪೆಟ್ಟು ಮಾದಿರ
15 ಹೂತು ಹೋಗುವ ಗದ್ದೆಗೆ ಮೂರು ಬೆಳೆ ಬೆಟ್ಟು ಗದ್ದೆಗೆ ಒಂದೆ ಬೆಳೆ
‘ಪದಕಟ್ಟಿ’ ಹೋದರೆ ಬೆಳೆಯೆ ಇಲ್ಲ ಮಾದಿರ
16 ಎಣೆಲ್ ಬೆಳೆಗೆ ಹನಿನೀರು ಸುಗ್ಗಿಗೆ ಬೇಕು ಅಜನೀರು
ಕೊಳಕೆಗೆ ಇರಬೇಕು ಅಡಿನೀರು ಮಾದಿರ
17 ಎಣೆಲ್ ಬೆಳೆ ಸೂಳೆ ಆದರೆ ಸುಗ್ಗಿದವು ಮದುಮಗಳು
ಕೊಳಕೆ ಮಾತ್ರ ಬಾಣಂತಿ ಹೇಳುವರಲ್ಲ ಮಾದಿರ
18 ಮಾಯಿ ತಿಂಗಳ ನಂತರ ಮಳೆಗಾಲ ಆಟಿ ನಂತರ ಅರೆಗಲ
ಮಾಯಿಯಲ್ಲಿ ಮಳೆ ಬಂದರೆ ‘ಮಲೆ’ ಬೆಳೆಯಬಹುದು ಮಾದಿರ
ನಲ್ಕೆಯವರು ನರ್ತನ ಸೇವೆ ನೀಡುವ ಮೂಲತಾನದ ದೈವಗಳ ಆರಾಧನೆಯ ಹಿನ್ನೆಲೆ ಕೃಷಿ, ಸಂಸ್ಕøತಿ ಎಂಬುದಕ್ಕೆ ಇವರ ಮಾದಿರ ಗಾದೆಗಳು ಪೂರಕ ಮಾಹಿತಿಯಾಗುತ್ತದೆ. ಮಾದಿರ ಗಾದೆಗಳು ಎಂದರೆ ಇವರ ಜಾತಿಯವರೇ ಕಟ್ಟಿರಬಹುದಾದ ಗಾದೆಗಳು.
(ಡಾ. ಇಂದಿರಾ ಹೆಗ್ತುಗಡೆ ತುಳುವರ ಮೂಲತಾನ ಪರಂಪರೆ ಮತ್ತು ಪರಿವರ್ತನೆ ನವಕರ್ನಾಟಕ 2012-2016 ಪು 353)

No comments:

Post a Comment