Tuesday, May 17, 2016

ಬಲಿ, ವಾಮನ ಮತ್ತು ಪರಶುರಾಮ

ತುಳುನಾಡು : ತುಳುನಾಡಿನಲ್ಲಿ ಬಂಗಾರ ಬದುಕನ್ನು ನೀಡಿದ ರೈತ ಅರಸ ಬಲಿಯನ್ನು ತುಳಿದ ಕಥೆ ಇದೆ. ಅನಂತರ ಪರಶುರಾಮ ಬಂದುದು ಪರಶುರಾಮ ಅವತಾರ. ಪರಶುರಾಮ ಕಡಲಿನಿಂದ ಭೂಮಿಯನ್ನು ಬಿಡಿಸಿದುದಾದರೆ ಬಲಿಯೊಂದಿಗೆ ಇಲ್ಲಿಯ ಸ್ಥಳೀಯ ಜನರನ್ನೂ ವಾಮನ ತುಳಿದನೇ ಎಂಬ ಪ್ರಶ್ನೆ ಏಳುತ್ತದೆ -ಡಾ ಇಂದಿರಾ ಹೆಗ್ಗಡೆ.

" ಪೌರಾಣಿಕ ಹಿನ್ನೆಲೆಯಿಂದ ಗ್ರಹಿಸುವುದಾದರೆ ಪರುಶುರಾಮನು ಸಮುದ್ರದಿಂದ ಬಿಡಿಸಿಕೊಂಡ ದೇಶಗಳಲ್ಲಿ ಒಂದು ತುಳುನಾಡು. ಆತ ಮಹಾರಾಷ್ತ್ರದ ಮುಂಬಯಿ ಸಮೀಪದ ಸೊಪಾರದಿಂದ ಕನ್ಯಕುಮಾರಿಯವರೆಗಿನ ಭೂಮಿಯನ್ನು ಸಮುದ್ರದಿಂದ ಬಿಡಿಸಿಕೊಂಡಾತ. ಈ ಕಟ್ಟುಕಥೆಯನ್ನು ನಂಬಲು ಭೂ ವಿಜ್ಞಾನ ಬಿಡುವುದಿಲ್ಲ. “ ಭೂ ವಿಜ್ಞಾನಿಗಳ ಅಭಿಪ್ರಾಯದಂತೆ, ಆರಂಭದಲ್ಲಿ ಆಫ್ರಿಕಾ ಮತ್ತು ಭಾರತದ ಭೂ ಪ್ರದೇಶ ಅಖಂಡವಾಗಿ ಒಂದೇ ಆಗಿದ್ದಿತ್ತು. ಜ್ವಾಲಾಮುಖಿಯ ಸಂಕ್ಷೋಭೆಯಿಂದಾಗಿ ಈ ಭೂಖಂಡದ ತಗ್ಗಿನ ಭಾಗಗಳನ್ನು ಸಾಗರದ ನೀರು ಆವರಿಸಿ ಪ್ರತ್ಯೇಕ  ಖಂಡಗಳಾದುವು. ಮೊದಲು ಹೊಸತಾಗಿ ನಿರ್ಮಾಣಗೊಂಡ ಹಿಂದೂ ಮಹಾಸಾಗರದ ಅಲೆಗಳು ಪಶ್ಚಿಮ ಘಟ್ಟಗಳನ್ನು ತೊಳೆಯುತ್ತಿದ್ದು ಕ್ರಮೆಣ ಸಾಗರಾಂತರ್ಗತ ಕ್ಷೋಭೆಯು ಶಾಂತವಾಗತೊಡಗಿದಂತೆ, ಸಾಗರವು ಹಿಂದೆ ಸರಿಯತೊಡಗಿ, ಗುಜರಾತಿನಿಂದ ಕನ್ಯಾಕುಮಾರಿಯವರೆಗಿನ ಭೂಬಾಗವು ಈಗಿನ ಸ್ವರೂಪವನ್ನು ಪಡೆಯಿತು. ಜನಾಂಗ ಸ್ಮøತಿಯ ಅವಶೇಷವಾಗಿ ಉಳಿದ ಈ ಪುರಾತನ ಘಟನೆಯೇ ಪುರಾಣ ರೂಪವನ್ನು ಪಡೆದು ಪರುಶುರಾಮ ಸೃಷ್ಟಿಯ ಅದ್ಭುತ ರಮ್ಯಕತೆಯ ಸೃಷ್ಟಿಯಾಗಿದ್ದಿರಬೇಕು. ಖ್ಯಾತ ಇತಿಹಾಸಕಾರರಾಗಿದ್ದ ಎ.ಡಿ.ಪುಸಾಲ್ಕರ್ ಅಂದಿರುವಂತೆ ಸಾಮಾನ್ಯವಾಗಿ ಜಗತ್ತಿನ ಪುರಾಣಗಳಲ್ಲಿ ಆಗುವಂತೆ ಇಲ್ಲಿಯೂ ಪ್ರಾಕೃತಿಕ ಮಹದ್ಘಟನೆ ಮತ್ತು ಮಾನವೀಯ ಪ್ರಕೃತಿಗಳು ಪುರಾಣಿಕರಣಗೊಂಡಿವೆ.” ದ್ರಾವಿಡ ಅಧ್ಯಯನ ಸಂ.3 ಸಂಚಿಕೆ 2  ಪ್ರಾಚೀನ ತುಳುನಾಡು ಐತಿಹ್ಯದೊಳಗಣ ಇತಿಹಾಸ ಪು 62.2005 ಹಂಪಿ ಕನ್ನಡ ವಿಶ್ವ ವಿದ್ಯಾನಿಲಯ)
ಸ್ಕಂಧ ಪುರಾಣದ ಹೇಳಿಕೆಯನ್ನೇ ಅನುಸರಿಸಿದರೂ , ಈ ಪ್ರದೇಶದಲ್ಲಿ ಬ್ರಾಹ್ಮಣರು  ಇರಲಿಲ್ಲವೆಂದಷ್ಟೇ ಹೊರತು ಮನುಷ್ಯವಸತಿಯೇ ಇರಲಿಲ್ಲವೆಂದು ಹೇಳಲಾಗುವುದಿಲ್ಲ. ಏಕೆಂದರೆ ಪುರಾಣದಲ್ಲಿಯೆ ಪರಶುರಾಮನು ವೈತರಣಿಯ ದಕ್ಷಿಣದ ಕಡಲ ದಂಡೆಯಲ್ಲಿ ಅಲ್ಲಿಯ ಮೂಲನಿವಾಸಿಗಳನ್ನು ಕಂಡ ಉಲ್ಲೇಖವಿದೆ. ಆದುದರಿಂದ ಪರುಶುರಾಮನಿಗಿಂತಲೂ ಹಿಂದೆ ಈ ಪ್ರದೇಶ ನಿರ್ಮಣಗೊಂಡಿತ್ತು ಎಂಬುದು ಸಿದ್ಧವಾಗುತ್ತದೆ.  

 ತುಳುನಾಡು ಸಮುದ್ರ ಹಿಂದೆ ಸರಿದ ಭಾಗ ಎಂಬುದಕ್ಕೆ ಅನೇಕ ವೈಜ್ಞಾನುಕ ಆಧಾರಗಳು ಸಿಗುತ್ತವೆ.

 “ ತುಳುನಾಡಿನ ಭೂರಚನೆಯನ್ನು ಕುರಿತಂತೆ ಪ್ರೊ ಗುರ್ರಪ್ಪ ಅವರು ಬಲು ಮಹತ್ವದ ಒಂದು ಅಂಶವನ್ನು ತಿಳಿಸಿದ್ದಾರೆ. ಮಂಗಳೂರಿನ ಸಮೀಪದ ಕೂಳೂರಿನಲ್ಲಿ ಸೇತುವೆಯ ಕೆಲಸ ನಡೆಯುತ್ತಿದ್ದಾಗ, ನದಿಯ ಪಾತ್ರದಲ್ಲಿ ಇಪ್ಪತ್ತೈದು ಅಡಿಗಳಷ್ಟು ಆಳದಲ್ಲಿ ದೊರೆತ, ಇದ್ದಿಲು ರೂಪವನ್ನು ಪಡೆಯತೊಡಗಿದ ಮರದ ತುಂಡೊಂದನ್ನು ವೈಜ್ಞಾನಿಕ ಪರೀಕ್ಷೆಗಾಗಿ ಅವರು ಮುಂಬಯಿಯ ಟಾಟಾ ಸಂಶೋಧನಾ ಸಂಸ್ಥೆಗೆ ಕಳುಹಿಸಿಕೊಟ್ಟರು. ಅಲ್ಲಿನ ವಿಜ್ಞಾನಿಗಳು ಅದನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ಅದರ ಕಾಲವನ್ನು 60,800 ವರ್ಷ ಎಂದು ತೀರ್ಮಾನಿಸಿದರು. ಇದರಿಂದ ತುಳುನಾಡಿನ ಕರಾವಳಿ ಪ್ರದೇಶದಲ್ಲಿ 60ಸಾವಿರ ವರ್ಷಗಳಿಗಿಂತಲೂ ಬಲು ಮುಂಚೆಯೇ ದಟ್ಟವಾದ ಅರಣ್ಯಗಳು ಇದ್ದುವೆಂದೂ, ಅದಕ್ಕೂ ಎಷ್ಟೋ ಹಿಂದೆ ಕಡಲು ಹಿಂದೆ ಸರಿದು ಈ ಭೂಭಾಗ ರಚನೆ ಗೊಂಡಿತು ಎಂಬುದು ಸಿದ್ಧವಾಗುತ್ತದೆ.” (ಅದೇ ಪು 64)

No comments:

Post a Comment