Thursday, June 29, 2017

ಕುವೈಟ್ ಬಂಟಾಯನ 2017

WELCOMING


‘ಎಲ್ಲರೂ ನಮ್ಮವರು’

ಅರಬ್ ರಾಷ್ಟ್ರಕ್ಕೆ ಪ್ರವಾಸ ಹೋಗುವುದು ನನ್ನ ಕನಸಾಗಿರಲಿಲ್ಲ. ಆದರೆ ಹೆಗ್ಡೆಯವರಿಗೆ ಹೋಗಲು ಆಸಕ್ತಿ ಇತ್ತು. ಅರಬ್ ರಾಷ್ಷ್ರಗಳಲ್ಲಿ ಇರುವ ಬಂಟರ ಸಂಘ, ತುಳುಕೂಟಗಳು ತುಳು ಸಂಸ್ಕøತಿಯ ಬಗ್ಗೆ, ಬಂಟ ಸಂಸ್ಕøತಿಯ ಬಗ್ಗೆ ತಮ್ಮ ಸಮಾರಂಭಗಳ ಮುಖ್ಯ ಅತಿಥಿಗಳಾಗಿ ಮಾತನಾಡಲು ಕೆಲವರನ್ನು ಕರೆದುದು ಅವರ ಗಮನಕ್ಕೆ ಬಂದಾಗ “ ಎಂತ ಮಾರಾಯ್ತಿ? ತುಳು ಸಂಸ್ಕøತಿ ಬಗ್ಗೆ, ಬಂಟರ ಸಮಗ್ರ ಜೀವನದ ಬಗ್ಗೆ ಅಧ್ಯಯನ ಮಾಡಿ ಕೃತಿ ಬರೆದು ವಿದ್ವಾಂಸರಲ್ಲಿ ಗುರುತಿಸಿಕೊಂಡ ಇವರ ಗಮನಕ್ಕೆ ನೀನು ಬರುವಿದಿಲ್ಲ ಯಾಕೆ?” ಎನ್ನುತ್ತಿದ್ದರು. “ಅದಕ್ಕೆ ಎರದು ಕಾರಣಗಳಿವೆ. 1 ನನ್ನ ಕೃತಿಗಳನ್ನು ಅವರು ಓದಿರುವುದಿಲ್ಲ. 2 ನಾನು ಮಹಿಳೆ. ಮಾತೃ ಪ್ರಧಾನ ಸಂಸ್ಕøತಿಯಲ್ಲಿ ಮಹಿಳೆಗೆ ಹಿಂದಿನ ಆಸನ.” ಇದು ನಾನು ಹೆಗ್ಡೆಯವರಿಗೆ ಅಂದು ನೀಡಿದ್ದ ಉತ್ತರ.
ನನ್ನ ಈ ನಂಬಿಕೆಯನ್ನು ಬುಡಮೆಲು ಮಾಡಿದ್ದು ಕುವೈಟ್ ಬಂಟರ ಸಂಘ.
ತುಳುನಾಡಿನಲ್ಲಿ ಬೆಂಗಳೂರಲ್ಲಿ ನಾನೆಷ್ಟೋ ಬಂಟರ ಸಂಘಗಳಲ್ಲಿ, ತುಳು ಸಂಘ ಸಂಸ್ಥೆಗಳ ಸಮಾರಂಭಗಳಲ್ಲಿ ಮುಖ್ಯ ಅತಿಥಿಯಾಗಿ ಪ್ರಧಾನ ಭಾಷಣಕಾರಳಾಗಿ ಭಾಗವಹಿಸಿದ್ದೆ. ನಮ್ಮ ಬಂಟ ಸಮುದಾಯದ ಘನತೆವೆತ್ತ ಹೆಮ್ಮೆಯ ವಿದ್ವಾಂಸರೊಬ್ಬರು ಹೇಳಿದ್ದರು, ”ನಮ್ಮವರು ಬರಹಗಾರರನ್ನು ಭಾಷಣಕ್ಕೆ ಕರೆಯುತ್ತಾರೆ. ಭಾಷಣ ಮುಗಿಸಿ ವೇದಿಕೆ ಇಳಿಯುವಾಗ ಯಾರೂ ಇರುವುದಿಲ್ಲ. ನಮ್ಮನ್ನು ಕರೆದ ಸಂಘಟಕರು ಅದೇ ವೇದಿಕೆಯಲ್ಲಿ ಇರುವ, ಅಥವಾ ಅಲ್ಲಿ ಹಾಜರಾಗಿರುವ ಸಿರಿವಂತರ ಹಿಂಬಾಲಕರಾಗಿ ಹೋಗುತ್ತಾರೆ. ನಾವು ಅನಾಥರಂತಾಗುತ್ತೇವೆ.” ಇದು ನಿಜ ಕೂಡಾ. ಆದರೆ ದೂರದ ಕುವೈಟ್‍ನಲ್ಲಿ ಹೀಗಾಗಲಿಲ್ಲ ಎನ್ನುವುದು ಅತಿಥಿಯಾಗಿ ಹೋದ ನನ್ನ ಹೆಮ್ಮೆ.
ಮೊದಲ ಬಾರಿಗೆ ವಿದೇಶಕ್ಕೆ ಒಂಟಿಯಾಗಿ ಪ್ರಯಾಣ ಎಂದಾಗ ನಾನು ತುಸು ಅಳುಕಿದೆ. ನನಗೆ ಕೆಲಸದ ಒತ್ತಡವೂ ಇತ್ತು. ಎಸ್ ಆರ್. ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ಉದ್ಘಾಟಣೆಗೆ, ಎಸ್ ಆರ್. ಹೆಗ್ಡೆ ‘ನುಡಿ ಚಿತ್ರ’ ಬಿಡುಗಡೆಗೆ ನಾನು ಊರಲ್ಲಿ ಇರುವ ಅಗತ್ಯ ಇತ್ತು.  ಆದರ ಚಾರಿಟೇಬಲ್ ಟ್ರಸ್ಟ್‍ನ ಕೃಷ್ಣಮೂರ್ತಿ ಮತ್ತು ಜ್ಯೋತಿ ಚೇಳಾೈರು ಟಸ್ಟನ ಕೆಲಸವನ್ನು ತಾವು ನೋಡಿಕೊಳ್ಳುವುದಾಗಿ ಹೇಳಿದರು.  ನಾನು ಆಹ್ವಾನವನ್ನು ಒಪ್ಪಿಕೊಳ್ಳಲೇ ಬೇಕು ಎಂದು ನನ್ನ ಮಕ್ಕಳು ಒತ್ತಡ ಹಾಕಿದರು. ಹೀಗೆ ನಾನು ಕುವೈಟ್ ವಿಮಾನ ಏರ ಬೇಕಾಯಿತು. ಬೇಂಗಳೂರು ವಿಮಾನ ನಿಲ್ದಾಣದಲ್ಲಿ ಮಿಮಿಕ್ರಿ ಕಲಾವಿದ ಅಶೋಕ ಪೊಳಲಿ ಮತ್ತು ಗಾಯಕ ವಿಶ್ವಾಸ ಗುರುಪುರ ಜೊತೆಯಾದರು.

ನಾವು ವಿಮಾನದಿಂದ ಇಳಿದು ನಿಲ್ದಾಣದಿಂದ ಹೊರಬರುತ್ತಿದ್ದಂತೆ ನಮ್ಮನ್ನು ಎದುರ್ಗೊಂಡವರು ಕುವೈಟ್ ಬಂಟರ ಸಂಘದ ಅಧ್ಯಕ್ಷ ಯದುನಾಥ ಆಳ್ವ ಮತ್ತು ಅವರ ತಂಡ. ಅಲ್ಲಿಂದ ನೇರವಾಗಿ ನಮ್ಮನ್ನು ಕುವೈಟ್‍ನ ಭವ್ಯ ಹೊಟೇಲ್ ‘ORINTIEL RESTAURANT"  ಗೆ ನಮ್ಮನ್ನು ಕರೆದೊಯ್ದು ‘ಸ್ವಲ್ಪ ಸುಧಾರಿಸಿ’ ಎಂದು ಅವರು ಮರಳಿದರು. ಕೋಣೆಯ ಒಳಗೆ ಹೋದಾಗ ಚಳಿಗಾಲದಲ್ಲಿ ಕಾಶ್ಮೀರದ ದಾಲ್ ಸರೋವರದ ಒಳಗೆ ಬೋಟ್ ಮನೆಗೆ ಹೊಕ್ಕಂತಾಯತು. ಕುವೈಟ್‍ನ ಮರುಭೂಮಿಯ ಶಾಖ ಹೊರಗೆ. ಹಾಗಾಗಿಯೇ ಒಳಗೆ ವಿಪರೀತ ಚಳಿ! ಸುದಾರಿಸಿಕೊಳ್ಳೋಣ ಎಂದಾಗ ಮಸಾಲೆ ದೋಸ ಮತ್ತು ವಡಾ ಬಂತು. ಬೆಂಗಳೂರು ಮಂಗಳೂರಲ್ಲೂ ಅನೇಕ ಕಡೆ ಅಷ್ಟು ಒಳ್ಳೆಯ ಮಸಾಲೆ ದೋಸೆ ಸಿಗುವುದಿಲ್ಲ. ದೋಸೆ ತಿಂದು ರಜಾಯಿ ಹೊದ್ದು ಮಲಗಿದ್ದೆ. ಎಂದೂ ಬಾರದ ನಿದ್ದೆ ಬಂದಿತ್ತು. “ಊಟಕ್ಕೆ ಕರೆದೊಯ್ಯಲು ಬರುತ್ತೇವೆ ಸಿದ್ಧರಾಗಿ” ಎಂದ ಯದುನಾಥ ಆಳ್ವ ಅವರ ಕರೆ ಎಬ್ಬಿಸಿತು.


ನಿರೂಪಕನಾಗಿ ಭಾರತದಿಂದ ಬಂದ ಸಾಹಿಲ್ ರೈ (ಈತ ಸಿನಿಮಾ ನಟ ಕೂಡಾ) ಅಶೋಕ ಪೊಳಲಿ, ವಿಶ್ವಾಸ್ ಗುರುಪುರ ನಾನು ಮತ್ತು ಯದುನಾಥ್ ಅವರ ಪತ್ನಿ ಶಾಲಿನಿ ಎಲ್ಲರೂ ಶಿರ್ವದ N. SATISHCHANDRA SHETTY ಶೆಟ್ಟಿ ಅವರ ಒರಿಯಂಟಲ್ ರೆಸ್ಟೋರೆಂಟ್ಗೆ ಮಧಾಹ್ನದ ಊಟಕ್ಕೆ ಹೋಗಿ ಸೊಗಸಾದ ಭಾರತೀಯ ಶೈಲಿಯ ಊಟ ಸವಿದೆವು.
ಮತ್ತೆ ಸ್ವಲ್ಪ ವಿರಾಮದ ಬಳಿಕ ಯದುನಾಥ್ ದಂಪತಿಗಳು ಅವರ ಕುಟುಂಬ ಮಿತ್ರರಾದ ಪ್ರಕಾಶ್ ಭಟ್ ಮತ್ತು ನೇಹಾ ಪ್ರಕಾಶ್ ಭಟ್ ಜೊತೆಗೆ ಬಂದರು. ನಾವು ಒಟ್ಟಾಗಿ ಹೋದುದು ಕುವೈಟ್ ಟವರ್ ಸಂದರ್ಶಿಸಲು. ಇರಾಕ್‍ನ ದೊರೆ ಸದ್ದಾಂ ಹುಸೇನ್ ಅವರ ಕೋಪಕ್ಕೆ ಪುಡಿಪುಡಿಯಾದ ನಗರದ ಕೆಲವು ನೆನಪುಗಳಲ್ಲಿ ಕುವೈಟ್ ಟವರ್ ಕೂಡಾ ಒಂದು. ಅರ್ದ ಒಡೆದು ಹೋಗಿದ್ದ ಕುವೈಟ್ ಟವರನ್ನು ಮತ್ತೆ ಮರು ನಿರ್ಮಿಸಿದರಂತೆ.ಪರ್ಷಿಯನ್ ಕಡಲಿನ ಮಧ್ಯ ಎದ್ದು ಬಂದ ಈ ಕುದುರು, ದ್ವೀಪವಾಗಿ ಬೆಳೆದರೂ ಇಲ್ಲಿ ಗಾಳಿಯಲ್ಲೂ ಈಗಲೂ ಮರುಭೂಮಿಯೇ.  ಮರಳು ಗಾಳಿಯಲ್ಲಿ ಕಣಗಳಾಗಿ ಬೆರೆತಿವೆ. ಇರಾಕ್ ಯುದ್ಧ ಮುಗಿದು ಕೆಲವು ವರ್ಷಗಳ ಕಾಲ ಉಸಿರಾಟದೊಂದಿಗೆ ಮರಳು ಮಿಶ್ರಿತ ಹೊಗೆಯೂ ಸೇರುತ್ತಿತ್ತಂತೆ. ತೈಲ ಸುಟ್ಟು ಹೊಗೆ ಆಕಾಶಕ್ಕೇರಿ ಅಲ್ಲಿ ಸ್ಟಾಕ್ ಆಗಿದೆಯಂತೆ. ಯಾವಾಗಲೊಮ್ಮೆ ಮಳೆಯ ಮೋಡ ಕೆಳಗಿಳಿಯುವಂತೆ ಕರಿಯ ಹೊಗೆ ಕೆಳಗಿಳಿದು ಗಾಳಿಯೊಂದಿಗೆ ಬೆರೆಯುತ್ತದೆಯಂತೆ. ಕರಿಸಿಂಬಳ ಮೂಗಿನಿಂದ ಇಳಿಯುವ ಪರಿ ಹೇಗಿರಬಹುದು? ನಾವು ಹೋದ ದಿನಗಳಲ್ಲೂ ಮಂಜುಕವಿದಂತೆ ಆಕಾಶ ಇತ್ತು. ‘ಅದು ಮಂಜು ಕವಿದುದು ಅಲ್ಲ ಮರಳು ಮೋಡವಾಗಿ ಇಳಿಯುತ್ತಿರುವುದು ಭೂಮಿಗೆ’ ಎಂದಾಗ ನಮಗೂ ಅಚ್ಚರಿ.  

ಅದಿರಲಿ ಪರ್ಷಿಯನ್ ಕಡಲಿಗೆದುರಾಗಿ ಇರುವ ಈ ಟವರ್ ಒಂದು ಅದ್ಭುತ ಆಕರ್ಷಣೆ! ಈ ಸಮುಚ್ಛಯದಲ್ಲಿ ಮೂರು ಟವರ್‍ಗಳಿವೆ. ಮುಖ್ಯ ಟವರ್‍ನ ಎತ್ತರ 614 ಅಡಿ. ಇದು ಎರಡು ಗೋಲ/ಗುಮ್ಮಟಗಳನ್ನು ಹೊಂದಿದೆ. ಸಮುದ್ರದ ಉಪ್ಪುನೀರನ್ನು ಸಿಹಿನೀರನ್ನಾಗಿ ಪರಿವರ್ತಿಸಿ ಇದರ ಒಂದು ಟವರ್ ನಲ್ಲಿ ಸಂಗ್ರಹಿಸಲಾಗಿದೆಯಂತೆ. ನಾನು ನೋಡಿಲ್ಲ. ಅದೇ ಗೋಲದಲ್ಲಿ ಮೇಲಿನ ಬಾಗದಲ್ಲಿ ಉಪಹಾರ ಗೃಹ ಇದೆ. 90 ಜನರು ಇಲ್ಲಿ ಉಪಹಾರ ಮಾಡಬಹುದು. ಸ್ವಾಗತಕಾರ ಚಾವಡಿ ಲಾಂಜ್ ಎಲ್ಲಾ ಇದೆ.
ಲಿಪ್ಟ್ ಮೂಲಕ ನಾವು ಮೇಲೆ ಹೋದೆವು. ಆದರೆ ಉಪಹಾರ ಗೃಹಕ್ಕೆ ಅಲ್ಲ. ನಾವು ಪ್ರವಾಸಿಗರಿಗಾಗಿ ವ್ಯವಸ್ಥೆ ಮಾಡಿದ ಭಾಗದಲ್ಲಿ ನಿಂತೆವು. ನಾವು ನಿಂತೇ ಇದ್ದೆವು ಕಡಲು ನಮಗೆ ಸುತ್ತುತ್ತಾ ಇತ್ತು. ಇದೇನಿದು ಎಂದು ನೋಡುವಾಗ  ಟವರ್ ಸುತ್ತುತ್ತಾ ಇದೆಯೆಂದರು. ಈ ಗೋಲ ಒಂದು ಸುತ್ತು ಹಾಕಲು 30 ನಿಮಿಷ ತೆಗೆದುಕೊಳ್ಳುತ್ತದೆಯಂತೆ.


ತೆರೆಗಳಿಲ್ಲದೆ ಕಡಲು, ಕಡಲ ಮಡಿಲಲ್ಲಿ ಆಡುವ ಮಕ್ಕಳು, ಕೋಳಿ ಮರಿಗಳಂತೆ ಕಾಣುವ ನಿಲುಗಡೆಯಲ್ಲಿರು ವಾಹನಗಳು, ಕಟ್ಟಡಗಳು ಇತ್ಯಾದಿ ಇತ್ಯಾದಿ................
ಆ ದಿನ ನಾನು ಬಂಟಾಯನದ ಸಾಂಸ್ಕøತಿಕ ಕಾರ್ಯಕ್ರಮದ ರಿಹರ್ಸಲ್ ನೋಡಲು ಅವರೊಂದಿಗೆ ಹೊರಟೆ. ಅಂದೇ ಅಲ್ಲಿದ್ದ ಸಡಗರ ಸಂಭ್ರಮ ಕಂಡು ಬೆರಗುಗೊಂಡೆ. ಸಾಹಿಲ್ ರೈ ಕೂಡಾ ಅಲ್ಲಿಗೆ ಬಂದಿದ್ದ. ನಿರೂಪಕನಾಗಿ ಕೆಲವು ಪೂವಧ ಸಿದ್ಧತೆಗಳಿಗಾಗಿ.
ಚಿಕ್ಕ ಪಟ್ಟ ಬಾಲೆ ಬಾಳೆಯರ ನೃತ್ಯ ಮತ್ತೆ ಮತ್ತೆ ಅಭ್ಯಾಸಮಾಡಲಾಯಿತು. “ಕಮರೊಟ್ಟು ಗ್ರಾಮೊಡು.......ಗುತ್ತುಡು ಗುಡ್ಡೆದ ಭೂತ ಉಂಡುಯೇ……” ಈ ಹಾಡಿಗೆ ನೃತ್ಯ ಮತ್ತೆ ಮತ್ತೆ ಅಭ್ಯಾಸಮಾಡಿಸಲಾಯಿತು. ಒಬ್ಬಾಕೆ ಮುದ್ದಾದ ಬಾಲೆಯನ್ನು ಬಳಿಗೆ ಕರೆದು ಪ್ರೀತಿಯಿಂದ ಕೇಳಿದೆ. “ ಬೂತ ಪಂಡ ಎಂಚಿನೆಂದ್ ಗೊತ್ತುಂಡ ಮಗಾ?” (ಭೂತ ಎಂದರೆ ಏನೆಂದು ತಿಳಿದಿಯೇ ಮಗಾ?” )
‘ಹಾಂ (ಅಹುದು)’ ಆಕೆಯ ಉತ್ತರ. ನನಗೂ ಖುಷಿಯಾಯಿತು. ಮಗುವಿಗೆ ಭೂತಾರಾಧನೆಯ ಬಗ್ಗೆ ಭೂತದ ಬಗ್ಗೆ ತಿಳಿದಿದೆ ಎಂದು. ಎಷ್ಟೆಂದರೂ ಬೂತಾರಾಧಕ ಮನೆತನದವಳಲ್ಲವೆ?
“ ದಾದೆ ಪನ್ಲೆ ತೂಕ” (ಏನು ಹೇಳಿ ನೋಡೋಣ)
ನಾನು ಮಾತು ಮುಗಿಯುವಷ್ಟರಲ್ಲಿ ನನ್ನ ಕೆನ್ನಗೆ ಅಪ್ಪಳಿಸಿ ಬಂತು ‘ಘೋಸ್ಟ್!’ ನನ್ನ ಬಳಿ ಇದ್ದ ಸಾಹಿಲ್ ಜೋರಾಗಿ ನಕ್ಕ. ನಾನು ಪೆಚ್ಚಾಗಿದ್ದೆ.“ನಾಳೆಯ ಭಾಷಣಕ್ಕೆ ಈ ಟಾಪಿಕ್ ತೆಗೆಯುವಿರಾ?”
“ಹೇಗೆ ತೆಗೆಯಲಿ ಸಾಹಿಲ್. ಅವಳ ಹೆತ್ತವರು ಇರಲಿ, ನಮ್ಮೂರಲ್ಲಿಯ ಎಷ್ಟು ಜನರಿಗೆ ಭೂತಾರಾಧನೆಯ ಬಗ್ಗೆ ತಿಳಿದಿದೆ. ನಮ್ಮ ಹಿರಿಯರು ನಂಬಿಕೊಂಡು ಬಂದ ದೈವ ನಮಗೆ ಕೇಡು ಬಗೆಯದು ಎಂಬ ವಿಶ್ವಾಸವೇ ಇಲ್ಲದ ಜನರನ್ನು ನಾನು ಭೂತಾರಾಧನೆಯ ಅಂಗಳದಲ್ಲಿ ಮನೆಯಲ್ಲಿ ನೋಡುತ್ತಿದ್ದೇನೆ. ಈ ಮಗುವಿಗೆ ಆಕೆ ಹೇಳುವ ‘ಘೋಸ್ಟ್’ ಅನ್ನು ಉಪಾಸನೆ ಮಾಡುವುದೂ ಗೊತ್ತಿರಲಾರದು” ಎಂದೆ.
ಅಂದು ಅಥಿತಿಯಲ್ಲದೆಯೂ ಅತಿಥಿಯ ಎಲ್ಲಾ ಗೌರವಗಳನ್ನು ಪಡೆದು ಆಸೀನಳಾಗಿದ್ದೆ.
ಮರುದಿನ ನಡೆದ ‘ಬಂಟಾಯ£’À ಕಾರ್ಯಕ್ರಮವಂತು ಬಹಳ ದೊಡ್ಡ ಹಬ್ಬ. ಅವರ ಸಂಭ್ರಮದ ಜೊತೆ ಪಾಲುದಾರರಾಗದೆ ಇರಲು ಸಾಧ್ಯವೇ ಇಲ್ಲ. ಅಂತಹ ಸೆಳೆತ ಅವರ ಕಾರ್ಯಕ್ರಮಕ್ಕೆ ಅದರ ಸಂಭ್ರಮಕ್ಕೆ ಇತ್ತು.
ಸಾಂಸ್ಕøತಿಕ ಕಾರ್ಯಕ್ರಮದ ನಡುವೆ ಸಭಾ ಕಾರ್ಯಕ್ರಮ ಇಟ್ಟಿದ್ದರು. ಕುವೈಟ್ ರಾಯಭಾರಿ ಸುನಿಲ್ ಜೈನ್ ಅತಿಥಿಯಾಗಿ ಬಂದುದು ಕಾರ್ಯಕ್ರಮದ ಆಯೋಜಕರಿಗೆ ಬಲ ತಂದಿತ್ತು. ನಾನು ಮೊತ್ತ ಮೊದಲ ಬಾರಿಗೆ ಭಾರತದ ರಾಯಭಾರಿಯೊಂದಿಗೆ ಪರಿಚಯಮಾಡಿಕೊಂಡು ಹರಟುವ ಅವಕಾಶ ತೊರೆತುದು ನನಗೂ ಅಭಿಮಾನ ತಂದಿತ್ತು.
ಅಂದಿನ ಸಾಂಸ್ಕೃತಿಕ ಕಾರ್ಯ ಕ್ರಮದಲ್ಲಿ ಕೊನೆಗೆ ಯಕ್ಷಗಾನ ಇತ್ತು. ಉಡುಪಿಯ ತಂಡ ಬಂದು ಉತ್ತಮ ಪ್ರದರ್ಶನ  ನೀಡಿ ಕೆಲವರಿಗೆ ಬಾಲ್ಯದ ನೆನಪುಗಳ ಬುತ್ತಿಯನ್ನು ಬಿಚ್ಚಿಸಿದರು. ( ಮನೆಯವರಿಗೆ ಹೇಳದೆ ಗುಟ್ಟಾಗಿ ಆಟ ನೋಡಲು ಹೋದುದ ಇತ್ಯಾದಿ) ನವಿಶ್ವಾಸ್ ಗುರುಪುರ, ಅಶೋಕ್ ಪೊಳಲಿ ಉತ್ತಮ ಪ್ರದರ್ಶನ ನೀಡಿದರು. ಮುಂಬಯಿಯಿಂದ ತನ್ನ ಪತ್ನಿ ಅನು ಪಾವಂಜೆಯ ಜೊತೆ ಬಂದ ‘ಚಿತ್ರ ಮಿತ್ರ’ ಖ್ಯಾತಿಯ ಕಲಾವಿದ ತನ್ನ ಅದ್ಭುತ ಪ್ರತಿಭೆಯಿಂದ ನೆರೆದವರನ್ನು ಬೆರಗು ಗೊಳಿಸಿದ. ಆತನ ಮಡದಿ ಅನು ಪಾವಂಜೆ ಕೂಡಾ ಕಲಾವಿದ ಕುಟುಂಬ ದಿಂದ ಬಂದ ಕಲಾವಿದೆ. ಜೊತೆಗೆ ಬರಹಗಾರ್ತಿ ಕೂಡಾ. ಎರಡು ಉತ್ತಮ ಕೃತಿಗಳನ್ನು ಕನ್ನಡ ಸಾರಸತ್ವ ಲೋಕಕ್ಕೆ ನೀಡಿದ್ದಾಳೆ. ಒಂದು ಪ್ರವಾಸ ಕಥನ ಮತ್ತೊಂದು ಕವನ ಸಂಕಲನ.
ಒಟ್ಟು ಕಾರ್ಯಕ್ರಮವನ್ನು ಮತ್ತಷ್ಟು ಹುರುಪು ಗೊಳಿಸಿದ್ದು ಯುವ ಅಭಿನೇತ ಸಾಹಿಲ್ ರೈಯ ಚೇತೋಹಾರಿ ನಿರೂಪಣೆ.

ಕುವೈಟ್ ಬಂಟರ ಸಂಘ ಅತಿಥಿಗಳಾಗಿ ಅಹ್ವಾನಿಸಿದ ಎಲ್ಲರನ್ನೂ ಗೌರವಪೂರ್ವಕ ಸನ್ಮಾನಿಸಿದ್ದು ಒಂದು ಅಪೂರ್ವ ಸಂಭ್ರಮ. ಯಕ್ಷಗಾನ ಕಲಾವಿದರು, ಮಿಮಿಕ್ರಿ ಕಲಾವಿದ, ಗಾಯಕ, ಚಿತ್ರ ಮಿತ್ರ ಮಾತ್ರವಲ್ಲ ನನ್ನನ್ನೂ ಸೇರಿಸಿ ಎಲ್ಲರನ್ನೂ ಕುವೈಟ್ ರಾಯಭಾರಿಯ ಉಪಸ್ಥಿತಿಯಲ್ಲಿ ಸನ್ಮಾನಿಸಿ ಗೌರವಿಸಿದ್ದು ಮರೆಯಲಾಗದ ನೆನಪು.
ಭಾರತದಿಂದ ಕಾರ್ಯಕ್ರಮಕ್ಕೆ ಹೋದವರು ಚೆನ್ನಾಗಿ ಕಾರ್ಯಕ್ರಮ ನೀಡುತ್ತಾರೆ ನಿಜ. ಉತ್ತಮ ಕಲಾವಿದÀರು ಎಂದು ಗುರುತಿಸಿಕೊಂಡವರನ್ನು ಮಾತ್ರ ಇಂತಹ ಕಾರ್ಯಕ್ರಮಗಳಿಗೆ ವಿದೇಶದಲ್ಲಿ ಇರುವ ಭಾರತೀಯರು ಆಹ್ವಾನಿಸುತ್ತಾರೆ. ಆದರೆ ಬಂಟಾಯನದ ಸಂದರ್ಭದಲ್ಲಿ ಅವರದೇ ಸದಸ್ಯರು ನೀಡಿದ ಸಾಂಸ್ಕøತಿಕ ಕಾರ್ಯಕ್ರಮಗಳು ಕೂಡಾ ಅಲ್ಲಿಗೆ ಬಂದ ಅತಿಥೇಯ ತಂಡಗಳಿಗೆ, ವ್ಯಕ್ತಿಗಳಿಗೆ “ನಾವು ನಿಮಗಿಂತ ಕಮ್ಮಿ ಇಲ್ಲ” ಎಂದು ಸವಾಲೊಡ್ಡಿದಂತಿತ್ತು. ಪುಟ್ಟ ಮಕ್ಕಳಿಂದ ತೊಡಗಿ ತರುಣಿಯರೂ ಸೇರಿ ಉತ್ತಮ ಕಾರ್ಯಕ್ರಮ ನೀಡಿದರು.
ಮರುದಿನ ನಡೆದ GETTOGETHER ಕೂಟ ಆಪ್ತ ಸಮಾಲೋಚನ ಶಿಬಿರದಂತಿತ್ತು. ಬಹಳ, ಬಹಳ ಆತ್ಮೀಯವಾಗಿ ನಡೆದ ಈ ಕೂಟದಲ್ಲಿ ಆತ್ಮೀಯ ನುಡಿಗಳು ನನ್ನ ಮತ್ತು ಚಿತ್ರ ಮಿತ್ರ ಪ್ರಕಾಶ್‍ನ ಮನದಾಳದ ನೋವನ್ನು ಸವರಿತು. ಒಂದು ಕ್ಷಣ ನೆರೆದಜನರೂ ಭಾವುಕರಾದರು. ‘ಎಲ್ಲರೂ ನಮ್ಮವರು’ ಎಂಬ ಆತ್ಮೀಯ ಭಾವದೊಂದಿಗೆ ಕುವೈಟ್ ಬಂಟರ ಸಂಘದ 2017ರ ಬಂಟಾಯನಕ್ಕೆ ತೆರೆ ಬಿತ್ತು. ಈ ಸಂದರ್ಭದಲ್ಲಿ ಕುವೈಟ್ ಬಂಟರ ಸಂಘದ ಸದಸ್ಯರು ಮತ್ತು ಸದಸ್ಯರಲ್ಲದ ಇತರರು, ನಮ್ಮನ್ನು ಆತ್ಮೀಯವಾಗಿ ಆದರಿಸಿದರು.

 ಮರುದಿನ ಶಾಲಿನಿ ತನ್ನ ಪುಟ್ಟ ಮಗ ನೈತಿಕ ಮಗನೊಂದಿಗೆ ನನ್ನನ್ನೂ ಕುವೈಟ್ ಮರುಭೂಮಿಮತ್ತು ಕಡಲ ಲೋಕದ ಅದ್ಭುತ ಲೋಕಕ್ಕೆ ಕರೆದೊಯ್ದರು. ನೈತಿಕ್ “ದೊಡ್ಡಾ ದೊಡ್ಡಾ “ ಎನ್ನುತ್ತಾ ಮತ್ಸ್ಯ ಪ್ರಪಂಚದ ಬಗ್ಗೆ, ಮರುಭೂಮಿಯ ಪ್ರಾಣಿ ಪ್ರಪಂಚದ ಪ್ರಶ್ನೆಗಳನ್ನು ಕೇಳುತ್ತಾ ನಡೆದಾಗ ನನಗೂ “ಎಲ್ಲರೂ ನನ್ನವರು” ಎನ್ನುವ ಭಾವ. ಊರಿಗೆ ಬಂದ ಮೇಲೂ ಕೆಲವೇ ಗಂಟೆಗಳ ಕಾಲ ನನ್ನೊಂದಿಗೆ “ದೊಡ್ಡಾ “ ಎಂದು ನಡೆದು ಬಂದ ನೆನಪು ಊರಿಗೆ ಬಂದ ಮೇಲೂ ಕೆಲವು ದಿನ ಕಾಡಿತು!ಕೊನೆಗೆ ನಾನು ಅಂದು ತುಳು ಭಾಷೆಯಲ್ಲ ಮಾಡಿದ ಭಾಷಣವನ್ನು ಮೆಚ್ಚಿ   ಯು ಟ್ಯೂಬ್ ಗೆ ಹಾಕಿ ಅದರ ಕೊಂಡಿಯನ್ನು ನನಗೆ ಕಳಿಸಿಕೊಟ್ಟರು.
Sunday, June 4, 2017

ತುಳುನಾಡಿನ ನಾಗ ಪಾತಾಳ ಲೋಕಕ್ಕಿಳಿದ ಕಥೆ-ವ್ಯಥೆ.
ವಿದ್ವಾಂಸರ ಪ್ರಕಾರ ನಾಗಾ ಎಂದರೆ ನೀರು. ಕಾಶ್ಮೀರದ ಅನೇಕ ಸರೋವರಗಳು ನಾಗಾ ಹೆಸರಿನಲ್ಲಿದೆ. ತುಳುನಾಡಿನಲ್ಲಿ  ನಾಗ ಬೀದಿ ಎಂದರೆ ಭೂಮಿಯಡಿಯಲ್ಲಿ ನೀರಿನ ಝರಿ ಹರಿಯುವ ಬೀದಿ/ದಾರಿ ಎಂಬರ್ಥವಿದೆ.
ನಾಗ ಬೆರ್ಮೆರ ಬನ ಇದ್ದಲ್ಲಿ ಬೆರ್ಮೆರೆ ಗುಂಡಿಗಳು, ಬೆರ್ಮೆರೆ ಕೆದುಗಳು, ಸಿರಿಬಾವಿಗಳು ಇವೆ. ಈ ಗುಂಡಿ, ಬಾವಿಗಳಲ್ಲಿ  ನೀರಿನ ಸೆಲೆ ಸದಾ ಜಿನುಗುತ್ತಿರುತ್ತದೆ. ನಾಗ ಬೆರ್ಮೆರ ಈ ಕ್ಷೇತ್ರಗಳಲ್ಲಿ ಕಂಬಲಗಳು ನಡೆಯುತ್ತವೆ. ಈ ಕಂಬಲಗಳು ಹೆಚ್ಚಾಗಿ ‘ಬ್ರಹ್ಮರ’ ಕಂಬುಲ ಎಂದು ಕರೆಸಿಕೊಳ್ಳುತ್ತವೆ. ಅಥವಾ ನಾಗಬೆರ್ಮೆರ ಪರಿವಾರ ದೈವ(ಭೂತ)ಗಳ ಹೆಸರಲ್ಲಿ ನಡೆಯುತ್ತವೆ. ಬೆರ್ಮೆರೆ ಕಂಬುಲ, ಬೆರ್ಮೆರೆ ಬಾಕ್ಯಾರ್ (ಬಾಕಿಮಾರು) ಇತ್ಯಾದಿ ನಾಗ(ಬೆರ್ಮೆರ) ಬನದ ಬಳಿ ಇರುತ್ತವೆ. ಇದು ಸದಾ ನೀರು ಇರುವ ಕ್ಷೇತ್ರಗಳು. ಹೀಗಾಗಿ ಇಲ್ಲಿ ಇರುವ ವಿಶಾಲ ಗದ್ದೆಗಳಲ್ಲಿ ಕಂಬುಲ ನಡೆಯುತ್ತದೆ. ಕಂಬುಲ ಭತ್ತದ ಬೇಸಾಯದ ಪೋಷಕವಾದ ಉಪಾಸನಾ ಆಚರಣೆ. ಹೀಗಾಗಿ ಕಂಬುಲ ಗದ್ದೆಗೂ ಮಡಿ ಇದೆ. ಬಾಕಿಮಾರಿಗೂ ಮಡಿ ಇದೆ. ಕಂಬುಲದ ಕೋಣಗಳಿಗೂ ಮಡಿ ಇದೆ. ಬಕಿಮಾರು ಮತ್ತು ಕಂಬುಲ ಗದ್ದೆಗಳ ಸಾಗುವಳಿಯಲ್ಲಿ ಅಂದರೆ ಕುಯ್ಲು ಮತ್ತು ನಾಟಿಯಲ್ಲಿ ವಿಶೇಷ ಆಚರಣೆಗಳು ಇರುತ್ತವೆ.

ಸಂಪಿಗೆ, ಬಕುಳ, ಸುರಗೆ ಕೇದಗೆ- ಮುಂತಾಂದ ಸುಗಂಧ ಪುಷ್ಪಗಳ ದಟ್ಟ ಕಾಡಿನ ನಡುವೆ ಪೂ ಮಣ್ಣಿನ ಹುತ್ತದಲ್ಲಿ  ಸುಖವಾಗಿ ಇದ್ದ  ನಾಗ-ನಾಗಬ್ರಹ್ಮನ ಬನ ಕಡಿಯಲು ಆರಂಭವಾದಾಗಲೇ ಭತ್ತದ ಬೇಸಾಯ ಅವನತಿಗೆ ಹೋಗುವ ಎಲ್ಲಾ ಸೂಚನೆಯೂ ಇತ್ತು. “ ನಾಗ-ನಾಗ ಬೆರ್ಮರ ಬನದ ಪಾತಾಳಕ್ಕಿಳಿದ ಬೇರನ್ನು ಕಡಿಯಬಾರದು, ಆಕಾಶಕ್ಕೇರಿದ ಚಿಗುರನ್ನು ಚಿವುಟಬಾರದು” ಎಂಬ ನಂಬಿಕೆಯನ್ನು ಕಿರಿಯರ ಒಡಲು ತುಂಬಿಸಿದ್ದರು ಹಿರಿಯರು. ಆದರೆ ಆ ನಂಬಿಕೆಯನ್ನು ಗಾಳಿಯಲ್ಲಿ ಹಾರಿಸಿ ತುಳುನಾಡಿನ ನಾಗಬೆರ್ಮರ ಕುಲದವರು ನಾಗಬೆಮೆರ ಬನವನ್ನು ಕಡಿಸಿ ಕಾಂಕ್ರೀಟ್ ಹಾಕಿಸಿ ನಾಗಬೀದಿಯನ್ನು ಶಾಶ್ವತವಾಗಿ ತಡೆದರು. ನಾಗಬನದ ಕಾಡು ಕಡಿದು ತಾವು ವರ್ಷಕ್ಕೆ ಒಮ್ಮೆ ಬರುವಾಗ ತಮಗೆ ಬಿಸಿಲು ತಾಗದಿರಲಿ, ನಾಗರಪಂಚಮಿಗೆ ಮಳೆಗೆ ತಾವು ನೆನೆಯದಿರಲಿ ಎಂದು ತಗಡಿನ ಚಪ್ಪರ ಹಾಕಿದರು. ನೀರಿನ ಸೆಲೆಗೆ ತಡೆಯೊಡ್ಡಿ ಕಾಂಕ್ರಿಟ್ ಹಾಕಿ, ಹಸಿರು ಚಪ್ಪರ ಕಾಡನ್ನು ಕಡಿದು ತಗಡು ಚಪ್ಪರ ಹಾಕಿ ಪರೂರಿನಿಂದ ಬರುವ ಬಂಧುಗಳಿಗೆ ಅನುಕೂಲಮಾಡಿಕೊಡುವಾಗ ಸರ್ಪಗಳ ಜೀವನಕ್ರಮದ ಬಗ್ಗೆ ತಿಳಿದುಕೊಳ್ಳುವ ಗೋಜಿಗೆ ಹೋಗದ ಮುಗ್ಧರಾದರು ನಮ್ಮವರು.

ಔದ್ಯಮಿಕ ರಂಗ ತುಳುನಾಡಿಗೆ ಪ್ರವೇಶ ಆಗುವ ಮೊದಲೇ ನಾಗಬನಗಳಿಗೆ ಕೊಡಲಿ ಬಿದ್ದುದು ಮುಂಬಯಿಯ ಹಣದ ಪ್ರಭಾವದಿಂದ. ನನ್ನ ಗಮನಕ್ಕೆ ಬಂದಂತೆ 1990ರ ದಶಕಗಳಲ್ಲಿ ಅಲ್ಲೊಂದು ಇಲ್ಲೊಂದರಂತೆ ಆರಂಭವಾದ ನಾಗ ಮಂಡಲ/ಬ್ರಹ್ಮ ಮಂಡಲಗಳು ಮುಂದೆ ಎಲ್ಲಾ ಕುಟುಂಬಗಳವರು ಸಮೂಹ ಸನ್ನಿಗೆ ಒಳಗಾಗಿ ತಮ್ಮ ತಮ್ಮ ನಾಗಬನಗಳನ್ನು ಕಡಿಯಲಾರಂಭಿಸಿದರು. ಪೈಪೋಟಿಗೆ ಬಿದ್ದಂತೆ ನಾಗಮಂಡಲಗಳು ನಡೆಯಿತು. ಇದು ಆರಂಭ ಕಾಲ.

ಮುಂದೆ ಇಲ್ಲಿಗೆ ಬಂದ ಬಹು ರಾಷ್ಟ್ರೀಯ ಉದ್ಯಮಗಳು ಭತ್ತದ ಬೇಸಾಯದ ಫಲವತ್ತಾದ ಭೂಮಿಗೆ ಮಣ್ಣು ಸುರಿದು ಭತ್ತದ ಬೇಸಾಯದ ಅವಸಾನಕ್ಕೆ ಮುನ್ನುಡಿ ಬರೆಯಿತು. ತದ ನಂತರ ಬಹುರಾಷ್ಟ್ರೀಯ ಕಂಪೆನಿಗಳು ಒಂದರ ಹಿಂದೆ ಮತ್ತೊಂದುರಂತೆ ಧಾಳಿಯಿಡತೊಡಗಿತು.

ನಾಗಬನಗಳ  ಪೂಮಣ್ಣಿನ ನೆಲಕ್ಕೆ ಕಾಂಕ್ರೀಟ್ ಬಿದ್ದು ಕಾಡು ಕಡಿದ ಮೇಲೆ ನೀರಿನ ಅಂತರ್ಜಳದ ಒರೆತಕ್ಕೆ ಧಕ್ಕೆಯಾಯಿತು.
ನಾಗ ಬೀದಿಗಳು, ನಾಗಬೆರ್ಮೆರ ಗುಂಡಿಗಳು, ಸಿರಿಬಾವಿಗಳಿಗೂ ಮಣ್ಣು ಬಿತ್ತು. ಕಂಬುಲಗಳ, ಬಾಕಿಮಾರು ಗದ್ದೆಗಳ ಮೂಲಕ ಸಾಮೂಹಿಕ ಬೇಸಾಯ ಮಾಡುತ್ತಿದ್ದ ಕ್ರಿಯೆಗಳೂ ನಿಧಾನವಾಗಿ ಮರೆಗೆ ಸರಿಯಿತು. ಉಪಾಸನಾ ಆಚರಣೆಯಾಗಿ ಇದ್ದ ಕಂಬುಲ ಶ್ರೀಮಂತರ ಕ್ರೀಡೆಯಾಗಿ ಪ್ರಾಣಿದಯಾಸಂಘದವರ ಗಮನ ಸೆಳೆಯಿತು. ಹೀಗಾಗಿ ಕಂಬುಲಕ್ಕೆ ನಿಷೇಧ ಬಿತ್ತು.

ಬೇಸಾಯವೇ ಮರೆಗೆ ಸರಿದ ಮೇಲೆ ಬೇಸಾಯಪೋಷಕವಾದ ಕಂಬುಲದಲ್ಲಿ ಸಾಂಪ್ರದಾಯಿಕ ಕಂಬುಲದವರು ಆಸಕ್ತಿ ಕಳಕೊಂಡರು. ಆದರೂ ದೈವದ ಸೇವೆ ಎಂದು ವಿಧಿವಿಧಾನವನ್ನು, ಆಚರಣೆಯನ್ನು ಮಾತರ ಉಳಿಸಿಕೊಂಡರು, ಬೇಸಾಯದ ಕೈ ಬಿಟ್ಟರ್ಲು.
ಭತ್ತದ ಬೇಸಾಯ ನಾಶವಾದಾಗÀ ಅಂತರ್ಜಳ ಕುಸಿಯಿತು. ಗದ್ದೆಗಳ ನಡುವೆ ಸದಾ ಅಂತರ್ಜಲವನ್ನು ಚಿಮ್ಮಿಸುತ್ತಿದ್ದ ಸಹಜ ನೀರಿನ ಬುಗ್ಗೆಗಳ ಬಾವಿಗಳೂ ಆರೈಕೆ ಮಾಡುವವರಿಲ್ಲದೆ ಪಾತಳಕ್ಕಿಳಿಯಿತು ಅಂತರ್ಜಲ.

ಭತ್ತದ ಬೆಳೆ ಭರ್ಜರಿಯಾಗಿ ಬೆಳೆಯುತ್ತಿದ್ದ ಕಾಲದಲ್ಲಿ ನೀರಿನ ಸಂಗ್ರಹಣೆಗೆ ರೈತರು ಗಮನ ನೀಡುತ್ತಿದ್ದುರಿಂದ ಸಣ್ಣ ಪುಟ್ಟ ತೊರೆಗಳಿಗೂ, ತೋಡುಗಳಿಗೂ ಅಡ್ಡ ಮಣ್ಣು ಹಾಕಿ ನೀರಿನ ಹರಿವನ್ನು ತಡೆದು ರೈತರು ನೀರನ್ನು ಸಂಗ್ರಹಿಸಿ ಕೊಳ್ಳುತ್ತಿದ್ದರು. ನದಿ ತೊರೆಗಳಿಗೆ ತಾವೇ ಅಡ್ಡಕಟ್ಟ ಕಟ್ಟಿ ಮಳೆ ನೀರು ಹರಿದು ಹೋಗದಂತೆ ವ್ಯವಸ್ಥೆ ಮಾಡುತ್ತಿದ್ದರು. ಮಳೆಗಾಲದ ನೀರು ಗುಡ್ಡದ ತಪ್ಪಲಲ್ಲಿ ಸಂಗ್ರಹವಾಗುವಂತೆ ನೋಡಿಕೊಳ್ಳುತ್ತಿದ್ದರು. ಮಾತ್ರವಲ್ಲ ಮನೆ ಮುಂದೆ ಸಣ್ಣ ತೋಡು ಹರಿಯುತ್ತಿದ್ದರೂ ಆ ನೀರಿಗೂ ಅಡ್ಡ ಹಾಕಿ ತಡೆದು ನೀರು ಪೋಲಾಗದಂತೆ ಜಾಗ್ರತೆವಹಿಸುತ್ತಿದ್ದರು. ಇಂತಹ ತೋಡುಗಳಲ್ಲಿ ಓಡಾಟಕ್ಕೆ ‘ಪಾಪು’ ಹಾಕುತ್ತಿದ್ದರು.

ಹಿಗಾಗಿ ಎಣೆಲ್, ಸುಗ್ಗಿ, ಕೊಳಕೆ ಬೆಳೆಗಳು ಬೆಳೆಯುವಾಗ ಭೂಮಿಯು ನೀರಿನಿಂದ ಸಮೃದ್ಧವಾಗಿರುತ್ತಿತ್ತು. ವರ್ಷಕ್ಕೆ ಕನಿಷ್ಟ ಮೂರು ಬೆಳೆ ತೆಗೆಯುತ್ತಿದ್ದರು. ಏತ ನೀರಾವರಿಯ ಮೂಲಕ ಗದ್ದೆಗಳಿಗೆ, ತೋಟಕ್ಕೆ, ನೀರು ಹಾಯಿಸಲಾಗುತ್ತಿತ್ತು. ಹೀಗಾಗಿ ಬೇಸಗೆಯ ಕಾಲದಲ್ಲೂ ಬೈಲು ಭೂಮಿಯಲ್ಲಿ ಹಸಿರು ಕಾಣುತ್ತಿತ್ತು.
ಮುಂದೆ ಮೊಬೈಲ್ ಪಂಪ್ (ಸೀಮೆ ಎಣ್ಣೆಯ ಪಂಪ್) ಬಂದ ಮೇಲೆ  ಕೊಳಕೆ ಬೆಳೆಯುವುದು ಹೆಚ್ಚಾಯಿತು.

ತುಳುನಾಡು ರಾಜಕೀಯವಾಗಿ ಕರ್ನಾಟಕಾಂತರ್ಗತ ರಾಜ್ಯವಾಗಿದ್ದರೂ ಸಾಂಸ್ಕøತಿಕವಾಗಿ ಮತ್ತು ಸಾಮಾಜಿಕವಾಗಿ ಅದು ಸ್ವತಂತ್ರ ರಾಜ್ಯ. ಹೀಗಾಗಿ ಕರ್ನಾಟಕದ ಒಳಗಿದ್ದರೂ ತುಳುನಾಡಿನ ತುಳುವರು ಸ್ವತ್ತಂತ್ರ ಅಸ್ಮಿತೆಯಲ್ಲಿ ಉಳಿದುಕೊಂಡರು. ಇದರ ಪರಿಣಾಮವಾಗಿ ಅಖಿಲ ಕರ್ನಾಟಕ ವ್ಯಾಪ್ತಿಯಲ್ಲಿ ಯಾವುದೇ ಜಿಲ್ಲೆಗೆ ಇರದ ಕನ್ನಡಿಗರ ವಾರೆ ನೋಟ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯತ್ತ ಹರಿಯಿತು. ಅದಕ್ಕೆ ಪೂರಕವಾಗಿ ಅವಿಭಜಿತ ದಕ್ಷಿಣಕನ್ನಡ ಅರ್ಥಾತ್ ತುಳುನಾಡಿನ ಭಾಷೆ, ನೆಲ, ಜಲ, ಸಮಾಜ ಪದ್ಧತಿ, ಉಪಾಸನಾ ವೈóಶಿಷ್ಟ್ಯ -ಇದನ್ನು ರಕ್ಷಿಸುವಲ್ಲಿ ತುಳುನಾಡಿನ ಪ್ರತಿನಿಧಿ ರಾಜಕಾರಣಿಗಳು ಪ್ರಯತ್ನ ಪಡಲಿಲ್ಲ. ಹೀಗಾಗಿ ಫಲವತ್ತಾದ ಭೂಮಿಯಾಗಿ ಭತ್ತದ ಕಣಜವಾಗಿದ್ದ ತುಳುನಾಡು ಈಗ ಬೆಂಗಾಡು ಆಗಿದೆ. ನಾಗ/ಬೆರ್ಮರ ಬನಗಳನ್ನು ಕಾಡುಗಳನ್ನು ಕಡಿದು ಭೂಮಿಗೆ ಕಾಂಕ್ರಿಟ್ ಹಾಕಿ, ಬಾನಿಗೆ ಶೀಟ್ ಹಾಕಿ ನೆಲ ಜಲದ ನಾಶಕ್ಕೆ ಮುನ್ನುಡಿ ಬರೆಯುತ್ತಿದ್ದ ದಿನಗಳಲ್ಲಿ ನಾನೊಂದು ಕವನ ಬರೆದಿದ್ದೆ. “ ಉಂದು ಏರ್ ಮಲ್ತಿ ಪಾಪ! ಏರೆ ತಟ್ಟು ಶಾಪ” ಎಂದು. ಹೌದು ಇಂದು ತಟ್ಟುತ್ತಿದೆ ಶಾಪ! ನಾವು ಹಿರಿಯರು ನಾಗಬೆರ್ಮೆರ ಬನ ಕಡಿದು ನೀರಿನ ಒರೆತ ತಡೆದ ಪಾಪ ನಮ್ಮ ಪೀಳಿಗೆಗೆ ಶಾಪವಾಗಿ ತಟ್ಟುತ್ತಿದೆ. ನಾಗ ಬೀದಿ/ನಾಗ ನಡೆ ಪಾತಳಕ್ಕೆ ಇಳಿದಿದೆ.
ಬೇಸಾಯ ನೇಪಥ್ಯಕ್ಕೆ ಸರಿದು ಹಳ್ಳಿಗಳು ಸುಡುಗಾಡಿನಂತಾಗುತ್ತಿವೆ. ತುಳುನಾಡಿನ ಹಳ್ಳಿಗಳಲ್ಲಿ ಕುಡಿಯಲೂ ನೀರಿಲ್ಲ. ಪೇಟೆಯವರಿಗೆ ನದಿನೀರು ಸರಬರಾಜು ಆಗುತ್ತದೆ. ಇಲ್ಲವೇ ಟ್ಯಾಂಕರ್ ನೀರು ಬರುತ್ತದೆ. ಆದರೆ ಹಳ್ಳಿಯವರಿಗೆ ಕುಡಿಯುವ ನೀರಿಗೆ ಬರ ಬಂದಿದೆ.

ಡಾ. ಇಂದಿರಾ ಹೆಗ್ಗಡೆ


Friday, March 31, 2017

ತುಳುವರು ಮತ್ತೊಂದು ಕುಟುಂಬ ದೈವ ಅಥವಾ ಸೀಮೆ ದೈವವನ್ನು ನಂಬಿ ನಡೆಯುವ ಪದ್ಧತಿ ಇಲ್ಲ. ತನ್ನ ಗಂಡ ಸತ್ತು ಗಂಡನ ಮನೆತೊರೆದಾಗ ಆವಳ ಗಂಡನ ಮನೆಯ ದೈವವನ್ನು ಆಕೆ ಲೆಕ್ಕೆಸಬೇಕಾಗಿಲ್ಲ. ಅವಳನ್ನು ಅವಳ ಕುಟುಂಬದೈವ ಗ್ರಾಮದೈವ ಸೀಮೆ ದೈವ ರಕ್ಷಿಿಸು ತ್ತದೆ. ಸತ್ತವರಿಗೆ ನಾವು ಅಗೆಲ್ ಬಡಿಸುತ್ತೀವಿ..ಅದು ಅವರ ನೆನಪಿಗಾಗಿ ಮಾತ್ರ. ಕೋಲ ನೇಮ ಮಾಡುವುದಿಲ್ಲ. ...ಹಾಗೆ ಬದುಕಿದ್ದವರು ಯಾರೂ ಯಾವ ಧರ್ಮದಲ್ಲೂ ದೇವರಾಗಿಲ್ಲ. ಯೇಸುವಾಗಲಿ, ಬುದ್ಧನಾಗಲಿ, ಕೃಷ್ನನಾಗಲಿ ರಾಮನಾಗಲಿ ಹೆಚ್ಚೇಕೆ ಶಿರಡು ಸಾಯುಬಾಬ ಆಗಲಿ ಈಗ ಬದುಕಿಲ್ಲ. ಆದರೂ ತುಳುನಾಡಿನ ದೈವಾರಾಧನೆ ಸತ್ತವರ ಆರಾಧನೆ ಎನ್ನುವುದು ಸೋಜಿಗ ತರಿಸುತ್ತದೆ.

“ನಾಡಿನ ಹಲವು ದೇವಾಲಯಗಳ ಧಾರ್ಮಿಕ ಒಲವು ಬದಲಾಗುತ್ತಾ ಬಂದಿರುವುದಿದೆ. ಇತಿಹಾಸದ ನಡಾವಳಿ ಜನರ ಧರ್ಮವನ್ನು ಬದಲಿಸಿದಂತೆ, ಅವರ ನೆರೆಯಲ್ಲಿರುವ ಗುಡಿಯ ಆಕಾರವೂ ಆಚಾರವೂ ಮಾರ್ಪಾಡುವುದು ಸಹಜವೇ. ಗರ್ಭಗುಡಿಯ ಒಳಗೆ ಮೂರ್ತಿ ಮೊದಲಿಗೆ ಜಾನಪದ ನೆಲೆಯಲ್ಲಿಯದೇ ಆಗಿದ್ದರೂ ಮುಂದೆ ಬೌದ್ಧ, ಜೈನ, ಶೈವ, ವೈಷ್ಣವ, ಶಾಕ್ತ ಮೊದಲಾದ ಪಂಥಗಳಿಗೆ ಪಕ್ಕಾಗುವಂತಾಯಿತು. ಜಗನ್ನಾಥ ಪುರಿಯ ದೇವರು ಈಗ ವಿಷ್ಣು. ಆದರೆ ಅದರ ಬೌದ್ಧ ಹಿನ್ನೆಲೆಯನ್ನಾಗಲೀ, ಶಾಕ್ತ ಪ್ರಭಾವವನ್ನಾಗಲೀ ಮರೆಯಲಾಗಲಿಲ್ಲ. ಮೊದಲಿಗೆ ಅದು ಜಾನಪದ ದೈವವೇ. ಬೌದ್ಧರ ತಾರಾಭಗವತಿ ಮಂಗಳಾದೇವಿ, ಕಾಮಾಕ್ಷಿ ದೇವಿಯರಾಗಲಿಲ್ಲವೇ? ಜೈನರ ಬಸದಿಗಳು ಶಿವದೇವಾಲಯವಾದ ಉದಾಹರಣೆಗಳಿವೆ. ಶೈವ ವೈಷ್ಣವ ಪಂಥಗಳಲ್ಲಂತೂ ಈ ಬಗೆಯ ವಿನಿಮಯ ನಡೆದೇ ಇದೆ. ಧಾರ್ಮಿಕ ಸ್ವರೂಪ ಏನೇ ಇರಲಿ; ಎಷ್ಟೇ ಬದಲಾಗಲಿ, ಮೂಲ ಮೂರ್ತಿಯ ಪಾವಿತ್ರ್ಯದ ಬಗ್ಗೆಯಂತೂ ಶ್ರದ್ಧೆ ಕದಲುವುದಿಲ್ಲ ಎಂಬುದು ಗಮನಾರ್ಹ. ಜಾನಪದ ಚೌಕಟ್ಟಿನ ಹಿಡಿತ ಅಷ್ಟು ಬಲವಾದುದು.” (ಉಲ್ಲೇಖ ಎಸ್ ಕೆ. ರಾಮ ಚಂದ್ರ ರಾವ್ ) ತುಳುನಾಡಿನ ಹುಟ್ಟಿ ಚಿತ್ತೇರಿಗಳು, ಬ್ರಹ್ಮಸ್ಥಾನಗಳು ವಿಷ್ಣು ದೇವಾಲಯ, ಜನಾರ್ಧನ ದೇವಾಲಯ, ಶೈವದೇವಾಲಯ, ದುರ್ಗಾ ದೇವಾಲಯಗಳಾಗಿವೆ.
ಬೆರ್ಮೆರೆ ಗುಂಡಗದ್ದುಗೆ
‘ಬೆರ್ಮೆರೆಗೆ ಗುಂಡ ನಾಗಗ್ ಬನ’ ಎಂಬುದು ರೂಢಿ ಮಾತು. ಬಿರ್ಮೆರೆ ಗುಂಡ ಗದ್ದುಗೆ ಎನ್ನುವುದು ಪಾಡ್ದನದ ನಿರೂಪಣೆ. ಮೂಲತಃ ಗುಂಡ ಎಂಬುದು ಮುರಕಲ್ಲಿನ ಗೋರಿ/ದೂಪೆ (ಸ್ತೂಪ)ಯ ಆಕೃತಿಯ ರಚನೆ. ಪಟ್ಟದ ಅರಸನಿಗೆ --- ರಚಿಸುವುದು ತುಳುವರ ಪದ್ಧತಿಯಾಗಿತ್ತು. ‘ಬೆರ್ಮೆರೆ ಗುಂಡ’ ಮುರಕಲ್ಲಿನ ಮುಡಿಂಜ/ಸಮಾಧಿಯಂತಿದೆ. ಉತ್ತರಕ್ರಿಯೆಯಂದು ರಚಿಸುವ ಗುರ್ಜಿಯೂ ಮುಡಿಂಜವನ್ನು ಹೋಲುತ್ತದೆ. ಇಂತಹ ಮುಡಿಂಜ/ಗೋರಿ/ದೂಪೆಯನ್ನು ಕೆಲವರು ‘ಚಿತ್ರಕೂಟ’ ಎನ್ನುತ್ತಾರೆ. ಚೈತ್ಯವೇ ಚಿತ್ರಕೂಟ. ಆದರೆ ಅದಕ್ಕೂ ಮೊದಲು ಅದು ಬರಿಯ ಹುತ್ತದ ರೂಪ. ಇಂತಹ ಹುತ್ತ ರೂಪವೂ ಅನೇಕ ಕಡೆ ಇವೆ.
“ತುಂಬ ಹಿಂದಿನ ಗುಡಿಗಳೆಲ್ಲ ಸತ್ತವರ ಸಮಾಧಿಗೆ ಸಂಬಂಧಿಸಿದ್ದು. ಸತ್ತವನ ನೆನಪನ್ನು ಉಳಿಸುವುದು ಈ ಗುಡಿಗಳ ಉದ್ದೇಶವಲ್ಲ. ಅವನಲ್ಲಿ ತಾತ್ಕಾಲಿಕವಾಗಿ ನೆಲೆಗೊಂಡಿದ್ದ ಅಜ್ಞಾತಾದ್ಬುತ ಶಕ್ತಿಗೊಂದು ಮನೆಯನ್ನು ಮಾಡುವುದೇ ಉದ್ದೇಶ. ಜನಾಂಗದ ರಕ್ಷಣಗೆ ಈ ಶಕ್ತಿಯಿಂದಲೇ ಎಂದಾದುದರಿಂದ ಜನಾಂಗದ ಜನರ ಪಾಲಿದೆ ಇಂಥ ಗುಡಿಗಳು ವಿಶೇಷವಾದ ಆದರಕ್ಕೆ ತಕ್ಕುವು!”83 .“ದೇವಾಲಯದ ಕಲ್ಪನೆಗೆ ರಚನೆಗೆ ಸ್ತೂಪ ನೇರವಾದ ಹಿನ್ನೆಲೆಯನ್ನು ಒದಗಿಸಿದೆ. ಸ್ತೂಪದ ಹಿನ್ನೆಲೆ ಅಗ್ನಿದ್ರಿಯದಲ್ಲಿದ್ದಿತು. ಈ ಸಂಪ್ರದಾಯಕ್ಕೂ ಸಾವು, ಸಮಾಧಿ, ಸ್ಮಾರಕ, ಆಲಯ ಆರಾಧನೆ ಕಲೆತು ಬಂದಿರುವುದನ್ನು ಕಾಣಬಹುದು. ಸತ್ತ ಸ್ಥಳದ ಮೇಲೆ ಲಿಂಗವನ್ನು ಕೂರಿಸುವ ಪದ್ಧತಿ ಇಂದಿಗೂ ಇದೆ. ಈ ಸ್ಥಳದಲ್ಲಿ ಮಂಟಪ ರಚಿಸುವ ವಾಡಿಕೆ ಇದೆ. ಹಿರಿಯ ಯತಿಗಳ ಸಮಾಧಿ ಸ್ಥಳಗಳಲ್ಲಿ ಬೃಂದಾವನಗಳನ್ನು ನಾವು ಕಾಣಬಹುದು. ಅವೆಲ್ಲ ಪೂಜಾಸ್ಥಾನಗಳೆಂದು ಬಗೆಯುವುದು ಇದೆ. ಹಳೆಯ ಕಾಲದಲ್ಲಿ ಸಮಾಧಿ ಸ್ಥಳದ ಮೇಲೆ ಯಾವುದಾದರೊಂದು ಮರವನ್ನು ಹುಟ್ಟಿಹಾಕುವ ಪದ್ಧತಿ ಇತ್ತು. ಇವನ್ನು ಚೈತನ್ಯ ವೃಕ್ಷಗಳೆಂದು ಕರೆಯುತ್ತಾರೆ. ಸಂಸ್ಕøತದಲ್ಲಿ ‘ಚಿತಿ’ ಎಂದರೆ ಹೆಣವನ್ನು ಸುಟ್ಟು ಬೂದಿಯನ್ನು ರಾಶಿ ಮಾಡುವುದು ಎಂದು ಅರ್ಥ. ಅದಕ್ಕೆ ಸಂಬಂಧಿಸಿದ್ದು ಚೈತ್ಯ. ಸತ್ತವರ ಚೇತನಗಳು ಮನೆ ಮಾಡಿಕೊಂಡಿರುವುದು ಎನ್ನುವುದು ಪ್ರಾಚೀನ ಕಲ್ಪನೆ. ಸತ್ತವರಿಗೆ ಮಾಡುವ ಸತ್ಕಾರಗಳು ಈ ಮರಕ್ಕೆ ನಡೆಯುತ್ತಿತ್ತು.” ( ತುಳುವರ ಮೂಲತಾನ ಆದಿ ಆಲಡೆ:ಪರಂಪರೆ ಮತ್ತು ಪರಿವರ್ತನೆ ' ಉಲ್ಲೇಖ ಎಸ್ ಕೆ. ರಾಮಚಂದ್ರ ರಾವ್.)

Friday, January 13, 2017

ತುಳುನಾಡಿನ ನೆಲದ ಸಂಸ್ಕøತಿಯ ಸೃಜನಶೀಲತೆ

ಒಂದು ಜನಾಂಗದ ಶ್ರೇಷ್ಟತೆಯ ಅಳತೆ ಗೋಳು ಆ ಜನಾಂಗದ ಸೃಜನ ಶೀಲತೆ.
ತುಳುನಾಡಿನ ನೆಲದ ಸಂಸ್ಕøತಿಯ ಸೃಜನಶೀಲತೆ ಮೌಖಿಕವಾಗಿ ಬೆಳೆದು ಬಂದಿದೆ. ದೈವ/ದೇವರ ಭಯವನ್ನು ಉದ್ದೀಪನಗೊಳಿಸುವಲ್ಲಿ  ತುಳು ಮೌಖಿಕ ಸಾಹಿತ್ಯ ಬಹಳ ಶಕ್ತಿಯುತವಾಗಿ ಕೆಲಸ ಮಾಡಿದೆ. ತುಳುನಾಡಿನ ನೆಲದ ಶಕ್ತಿಗಳ ಉಪಾಸನೆಗೆ ಈ ಮಾಖಿಕ ಸಾಹಿತ್ಯ ಬಹಳ ಅಗತ್ಯವಾಗಿದೆ. ಮೌಖಿಕ ಸಾಹಿತ್ಯ  ನೆಲಮೂಲ ಶಕ್ತಿಗಳ  ಉಪಾಸನೆಯ ಜೀವನಾಡಿ.

 ಅರಸು (ಚಕ್ರವರ್ತಿ) ರಾಜನ್ (ಅರಸು) ಬಂಟ (ಮಂತ್ರಿ) ಹಾಗೂ ಪರಿವಾರ ದೈವಗಳ ಶ್ರೇಣೀಕೃತ ಹಂತಗಳನ್ನು ಈ ದೈವವಗಳು ಹೊಂದಿರುವುದು ಕುತೂಹಲಕರ ಸಂಗತಿ. ಆಳುವ ಅರಸರತೆ ಈ ದೈವಗಳು ಕೂಡಾ ಪ್ರಾದೇಶಿಕ ವ್ಯಾಪ್ತಿಯನ್ನು ಹೊಂದಿವೆ.

ಆಯಾ ದೈವಗಳ ಪ್ರಾದೇಶಿಕ ವ್ಯಾಪ್ತಿಯೊಳಗೆ ಅನ್ಯ ಪ್ರದೇಶದ ದೈವಗಳ (ನಂಬಲು) ಸ್ಥಾಪನೆಗೆ ಆ
ಯಾ ಕ್ಷೇತ್ರದ ದೈವಗಳು ಅವಕಾಶ ಕೊಡುವುದಿಲ್ಲ. ಅಕಸ್ಮಾತ್ ಯಾರಾದರೂ ಮತ್ತೊಂದು ಪ್ರದೇಶದ ದೈವವನ್ನು ನಂಬಬೇಕಾದ ಅನಿವಾರ್ಯ ಸಂದರ್ಭ (ಉದಾಃ ತವರು ಮನೆಯ ದೈವವನ್ನು  ಗಂಡನ ಊರಲ್ಲಿ ನಂಬುವಾಗ) ಆ ಊರಿಗೆ ತಂದ ಅಥವಾ ವಲಸೆ ಬಂದ ದೈವವು ಇದ್ದ ದೈವದ ಅಡಿಯಾಳಾಗ ಬೇಕಾಗುತ್ತದೆ. ಒಂದು ಊರಿಗೆ ವಲಸೆ ಬಂದ ದೈವಕ್ಕೆ ಸಾರ್ವಭೌಮತೆ ಇರುವುದಿಲ್ಲ.

ಇತರ ಕೆಲವು ದೈವಗಳನ್ನು ಪರಿವಾರದೈವಗಳೆಂದು ಕರೆಯುತ್ತಾರೆ.
ಮೇಲ್ ಸ್ತರದ ದೈವಗಳು ನಾಥಪಂಥದಮೂಲದವುಗಳಾಗಿವೆ.


ಪರಿವಾರ ದೈವಗಳ ಹೊರತಾಗಿ ಕೆಲವು ಚಿಲ್ಲರೆ ದೈವಗಳು ತುಳುನಾಡಿನಲ್ಲಿ ಅನೇಕ ಇವೆ. ಇವನ್ನು ‘ಸಾರಮಾನಿ’ ದೈವಗಳು ಎಂದು ಕರೆಯುವ ರೂಢಿ ಇದೆ. `ಸಾರಮನ್ನ ಬೂತೊಲು ನೂತ್ರ ಗಂಡಗಣೊಕುಲು’ ಅಂದರೆ ಸಾವಿರಾರು ಭೂತಗಳು ನೂರಾರು ಗಂಡ ಗಣಗಳನ್ನು ಪರಿವಾರವಾಗಿ ಉಳ್ಳವ ನಾಗ ಬಿರ್ಮೆರ್ ಎಂದು ಪಾಡ್ದನಗಳಲ್ಲಿ ಬಿಂಬಿತವಾಗಿದೆ. ಭೂತಗಳ ಅರಸು ಉಲ್ಲಾಯ. ಅರಸು ದೈವ. ರಾಜನ್ ದೈವಗಳು ಹಾಗೂ ಅವುಗಳ ಪರಿವಾರ ದೈವಗಳು. ಈ ದೃಶ್ಯವನ್ನು ಉಲ್ಲಾಯ ಕೋಲದಲ್ಲಿ ಕಾಣಬಹುದು.
ಕೆಲವೊಂದು ಆಚರಣೆಗಳಲ್ಲಿ ‘ಸಾರಮನ್ನ ಬೂತೊಲು ನೂತ್ರ ಗಂಡಗಣೊಕುಲು’ ದೈವಗಳಿಗೆ ಸೇವೆ ಇದೆ. ಗಂಡಗಣಗಳಿಗೆ  ಬಾರ್ನೆಗೆ (ಆಹಾರ)ಮಾಂಸಾಹಾರ ಅಗೆಲ್ ಇದೆ.

 ಚಿಲ್ಲರೆ ದೈವಗಳಿಗೆ ಎಣ್ಣೆ ಬೂಲ್ಯದ ಪದ್ಧತಿ ಇಲ್ಲ. ಆ ದೈವಗಳಿಗೆ ಅರಿಕೆ ಇಲ್ಲ ಬೇಡಿಕೆ ಇಲ್ಲ. ಹರಕೆ ಇಲ್ಲ. ಅರಸು-ರಾಜನ್ ದೈವಗಳ ನೇಮದ ದಿನ, ಇಂತಹ ಕೆಲವು ಚಿಲ್ಲರೆ ದೈವಗಳು ನರ್ತಿಸುತ್ತವೆ. ಬೃಹತ್ ಅಣಿ ಕಟ್ಟಿ ನರ್ತನ ಸೇವೆಯ ಜೊತೆಗೆ ಮಾತಿನ ಚಾಕಚಕ್ಯತೆ ಮೆರೆಯುವ ಅರಸು ದೈವಗಳ ಪಾತ್ರಿಗಳಾದ ಪಂಬದ, ನಲ್ಕೆ ಪಾತ್ರಧಾರಿಗಳ ಮೇಲೆ ಇದ್ದ ಗಮನವನ್ನು ನೆರದ ಜನರಿಂದ ವಿಮುಖಗೊಳಿಸಿ ಆ ಪಾತ್ರಿಗಳಿಗೆ ತುಸು ಉಸಿರಾಡಲು ಅವಕಾಶ ನೀಡಲೆಂದು  ಇಂತಹ ಚಿಲ್ಲರೆ  ದೈವಗಳ ಪಾತ್ರಗಳನ್ನು ಪ್ರಹಸನ ರೂಪದಲ್ಲಿ ಅಬಿನಯಿಸಲು  ಅವಕಾಶ ಕಲ್ಪಿಸಲಾಗಿದೆ. ಈ ಪಾತ್ರಗಳಲ್ಲಿ ಹೆಚ್ಚಾಗಿ ಹುಡುಗರು ಇರುತ್ತಾರೆ. ಇದು ಒಂದು ವಿಧದಲ್ಲಿ ಮುಂದಿನ ಜನಾಂಗಕ್ಕೆ ತರಬೇತಿ ಕೂಡಾ. ಈ ಹುಡುಗರು ಹಾಸ್ಯ ಪ್ರಹಸನದ ಮೂಲಕ ಜನರನ್ನು ರಂಜಿಸಿ ನೆರದ ಜನರ ಗಮನವನ್ನು ಅಣಿ ಕಟ್ಟಿರುವ ಅರಸು /ರಾಜನ್ ದೈವದ  ಕಡೆಯಿಂದ ವಿಮುಖಗೊಳಿಸುತ್ತಾರೆ. ಆಗ ಅರಸು /ರಾಜನ್ ದೈವದ ಪಾತ್ರಧಾರಿಗೆ ದೈವತ್ವದಿಂದ ಮನುಷ್ಯತ್ವಕ್ಕೆ ಮರಳಲು ಅವಕಾಶ ಸಿಗುತ್ತದೆ. ಆತನ ದೇಹಾಲಸ್ಯ ತೆಗೆಯಲು ಈ ಸಂದರ್ಭವನ್ನು ಆತ ಉಪಯೋಗಿಸಿಕೊಳ್ಳುತ್ತಾರೆ.

Monday, August 29, 2016

ಇಂದು ನಿನ್ನ ಜನುಮದಿನ.....
ನೀನು ಸಾಯಬಾರದಿತ್ತು


ನೀನು ಸಾಯಬಾರದಿತ್ತು
ಸತ್ತು ಕಾಡಬಾರದಿತ್ತು

ನಿದ್ದೆ ಕೆಡಿಸಿ ಕಾಡುತ್ತಿರುವೆ
ಹಸಿವು ಇಂಗಿಸಿ ಕಾಡುತ್ತಿರುವೆ
ಚೈತನ್ಯವ ಕದ್ದು ಕಾಡುತ್ತಿರುವೆ

ದೇಹದೊಳಗೆ ಕೊಳ್ಳಿಯಾಗಿ
ಉರಿದು, ಉರಿಸಿ ಕಾಡುತ್ತಿರುವೆ
ಹೊರಗಿನ ಬೆಂಕಿಯನು ಆರಿಸಬಹುದು
ಒಳಗಿನ ಉರಿಯನು ಆರಿಸುವು ದೆಂತು?

ಮಾಯವಾದೆ ಅನಂತದಲ್ಲಿ
ನನ್ನ ಒಂಟಿಯಾಗಿಸಿ. ಮತ್ತೆ
ಕಾಡುತ್ತಿರುವೆ ಬದುಕು ಬರಡಾಗಿಸಿ

ನೋವು ನನ್ನದು ಧ್ಯಾನ ನಿನ್ನದು
ಸ್ಪೂರ್ತಿ ಬೇಕು ಗೆಳೆಯಾ
ಬದುಕು ಸವೆಸಲು


ನೀನು ಸಾಯಬಾರದಿತ್ತು
ಸತ್ತು ಕಾಡಬಾರದಿತ್ತು.


Friday, July 22, 2016

ಮಾದಿರ ಗಾದೆಗಳು ಮತ್ತು ಭತ್ತದ ಬೇಸಾಯ


ಆಟಿ ತಿಂಗಳಲ್ಲಿ ಊರು ಸುತ್ತುವ ಮಾದಿರನರ್ತನದಲ್ಲಿ ಮಾದಿರ ಗಾದೆಗಳನ್ನು ಹಾಡುತ್ತಾ ಹೇಳುತ್ತಾರೆ. ತೆಂಬೆರೆ ನುಡಿಸುವವಳು ಹಾಡುವ ಪಲ್ಲವಿಯನ್ನು ನರ್ತಕಿಯು ಪುನರಾವರ್ತಿಸುತ್ತಾಳೆ. ಇವರ ಗಾದೆಗಳಲ್ಲಿ ತುಳುನಾಡಿನ ಮಣ್ಣಿನ ಕೃಷಿ ಸಂಸ್ಕøತಿಯ ಗುಣ ಇದೆ; ಮಳೆ ಬೆಳೆಯ ಚಿತ್ರಣ ಇದೆ. ಉದಾಹರಣೆಗೆ ಕೆಲವು ಗಾದೆಗಳು ಇಲ್ಲಿವೆ.
1 ಪಗ್ಗು ತಿಂಗಳ ಹದಿನೆಂಟು ಸಲುವಂದು ಗದ್ದೆಯಲ್ಲೊಮ್ಮೆ ಕಟ್ಟಬೇಕಂತೆ
(ಕೋಣ) ಮೂಲೆಯಲ್ಲಿ ಕೈ ಬಿತ್ತು ಹಾಕಿ ನೇಜಿ ಹಾಕಬೇಕು ಮಾದಿರ
2 ಸುಗ್ಗಿಯಲ್ಲಿ ಬೆಳೆಯು ಅತಿಕಾರೆ ಸತ್ಯ ಎನ್ನುವರು ಮಾದಿರ
ಸುಗ್ಗಿ ಅಲ್ಲದೆ ಬೇರೆ ಬೆಳೆಗೆ ಬೆಳೆಯಬಾರದು ಮಾದಿರ
3 ಬೆಳೆಯ ಲಕ್ಷಣ ನೇಜಿಯಲ್ಲಿದೆ, ಬತ್ತದ ಲಕ್ಷಣ ಬೆಳೆಯಲ್ಲಿದೆ
ರೈತನ ಲಕ್ಷಣ ಕಣಜದಲ್ಲಿಲ್ಲವೇ ಮಾದಿರ?
4 ಆಟಿಯಲ್ಲಿ ಮಳೆ ಬಂದರೆ ಅಟ್ಟ ಮುರಿಯಬಹುದು (ಉಪ್ಪರಿಗೆ) ಮಾದಿರ
ಸೋಣದಲ್ಲಿ ಮಳೆ ಬಂದರೆ ಸೊಂಟ ಮುರಿಯ ಬಹುದು ಮಾದಿರ
5   ಸಮ ತಟ್ಟಿಗೆ ಬಾರದೆ ಕೋಣಗಳಿಗೆ ಹಲಗೆ ಇಡಬಾರದು
ಹಲ್ಲು ಬಾರದ ಕರುಗಳನ್ನು ಒಣ ಬೇಸಾಯಕ್ಕೆ ಉಳಬಾರದು ಮಾದಿರ
6 ಹತ್ತನಾಜೆಗೆ ಹತ್ತು ಹನಿ ಮಳೆ ಇದೆಯಂತೆ ಕೇಳಿದೆಯಾ
ಪೂಜೆ ಬಲಿ ಹೊರಗಿನಿಂದ ಒಳಗೆ ಸೇರುತ್ತದೆ ಮಾದಿರ
7 ನೀರು ಇಲ್ಲದ ಕೆರೆ ಅಲ್ಲ ಬೆಳೆ ಆಗದ ಗದ್ದೆ ಅಲ್ಲ
ಬೈಹುಲ್ಲು ಇಲ್ಲದ ಕಾಲದಲ್ಲಿ ಕೋಣಗಳಿಲ್ಲ ಕೇಳಿದೆಯಾ ಮಾದಿರ
8 ನೀರು ಇರುವÀ ಬೈಲಿನಲ್ಲಿ ನಿಧಿ ಇದೆ ಕೇಳಿದೆಯಾ
ನೀರು ಇಲ್ಲದ ಊರಿನಿಂದ ಓಡುವುದೊಳಿತು ಮಾದಿರ
9 ಕಾಡು ಕರೆ ಗದ್ದೆ ಕಲ ನೀರು ನಿಧಿ ಸಾಲದು
ಭೂಮಿ ಜನ ಕೋಣ ಬೀಜ ಎಲ್ಲ ಬೇಕು ಮಾದಿರ
10 ದೂರ ಇರುವ ಬೈಲಿಗಿಂತ ಹತ್ತಿರ ಇರುವ ಬೆಟ್ಟು ಒಳ್ಳೆಯದು
  ಹರಿವ ನೀರಿನ ಗದ್ದೆ ಇದ್ದರೆ ಬಾರಿ ಚೆನ್ನ ಮಾದಿರ
11 ಕಾಡಿನ ನೀರಿನ ಬಳಿಯ ಗದ್ದೆ ಅಲ್ಲ;
ತೋಡಿನ ನೀರಿನ ಬಳಿಯ ಮನೆ ಅಲ್ಲ
ತಲೆನೀರು (ಕೆರೆ) ಇಲ್ಲದ ಬೆಟ್ಟಲ್ಲ ಹೇಳುವರಲ್ಲ ಮಾದಿರ
12 ಭತ್ತ ಇದ್ದರೆ (ತೆನೆ) ಬಾಗುತ್ತದೆ. ಜೊಳ್ಳು ಆದರೆ ನೆಟ್ಟಗೆ ನಿಲ್ಲುತ್ತದೆ.
ಪೈರಿಗಿಂತ ಎತ್ತರ ಕಳೆ; ಏನು ಹೇಳಲಿ ಮಾದಿರ ?
13 ಹಸುಗಳು ಇಳಿದ ಗದ್ದೆಯಲ್ಲಿ ಹುಲ್ಲು ಅದರೂ ಉಳಿಯುತ್ತದೆಯಂತೆ
ಕೋಳಿ ಇಳಿವ ಗದ್ದೆಯಲ್ಲಿ ಹುಲ್ಲು ಸಿಗದು ಮಾದಿರ
14 ಹೆಚ್ಚು ದಿನ ನೆರೆ ಕೂತರೆ ಬೆಳೆ ಕೊಳೆಯಬಹುದು ಮಾದಿರ
ನೆರೆ ಇಲ್ಲದೆ ಹೋದರೆ ಪಟ್ಲ ಗದ್ದೆಗೆ ಪೆಟ್ಟು ಮಾದಿರ
15 ಹೂತು ಹೋಗುವ ಗದ್ದೆಗೆ ಮೂರು ಬೆಳೆ ಬೆಟ್ಟು ಗದ್ದೆಗೆ ಒಂದೆ ಬೆಳೆ
‘ಪದಕಟ್ಟಿ’ ಹೋದರೆ ಬೆಳೆಯೆ ಇಲ್ಲ ಮಾದಿರ
16 ಎಣೆಲ್ ಬೆಳೆಗೆ ಹನಿನೀರು ಸುಗ್ಗಿಗೆ ಬೇಕು ಅಜನೀರು
ಕೊಳಕೆಗೆ ಇರಬೇಕು ಅಡಿನೀರು ಮಾದಿರ
17 ಎಣೆಲ್ ಬೆಳೆ ಸೂಳೆ ಆದರೆ ಸುಗ್ಗಿದವು ಮದುಮಗಳು
ಕೊಳಕೆ ಮಾತ್ರ ಬಾಣಂತಿ ಹೇಳುವರಲ್ಲ ಮಾದಿರ
18 ಮಾಯಿ ತಿಂಗಳ ನಂತರ ಮಳೆಗಾಲ ಆಟಿ ನಂತರ ಅರೆಗಲ
ಮಾಯಿಯಲ್ಲಿ ಮಳೆ ಬಂದರೆ ‘ಮಲೆ’ ಬೆಳೆಯಬಹುದು ಮಾದಿರ
ನಲ್ಕೆಯವರು ನರ್ತನ ಸೇವೆ ನೀಡುವ ಮೂಲತಾನದ ದೈವಗಳ ಆರಾಧನೆಯ ಹಿನ್ನೆಲೆ ಕೃಷಿ, ಸಂಸ್ಕøತಿ ಎಂಬುದಕ್ಕೆ ಇವರ ಮಾದಿರ ಗಾದೆಗಳು ಪೂರಕ ಮಾಹಿತಿಯಾಗುತ್ತದೆ. ಮಾದಿರ ಗಾದೆಗಳು ಎಂದರೆ ಇವರ ಜಾತಿಯವರೇ ಕಟ್ಟಿರಬಹುದಾದ ಗಾದೆಗಳು.
(ಡಾ. ಇಂದಿರಾ ಹೆಗ್ತುಗಡೆ ತುಳುವರ ಮೂಲತಾನ ಪರಂಪರೆ ಮತ್ತು ಪರಿವರ್ತನೆ ನವಕರ್ನಾಟಕ 2012-2016 ಪು 353)

Friday, July 15, 2016

ಪಾಡ್ದನ ಕಟ್ಟುವಿಕೆಕರ್ನಾಟಕದ ಕರಾವಳಿ ಭಾಗದ ತುಳುನಾಡಿನ ತುಳು ಭಾಷೆ ಗ್ರಂಥ ಸಾಹಿತ್ಯದಲ್ಲಿ ಬಡವಾದರೂ ಮೌಖಿಕ ಸಾಹಿತ್ಯದಲ್ಲಿ ಶ್ರೀಮಂತವಾಗಿದೆ. ಹೀಗಾಗಿ ತುಳು ಸಾಹಿತ್ಯ ಎಂದಾಗ ಪಾಡ್ದನ ಸಾಹಿತ್ಯವೇ ಗಮನಸೆಳೆಯುತ್ತದೆ  ಅಕ್ಷರ ಜ್ಞಾನ ಇಲ್ಲದ ತುಳು ಜನಪದರು ಸೃಜಿಸಿದ ತುಳು ಮೌಖಿಕ ಕಾವ್ಯ ಪರಂಪರೆ ಶ್ರೀಮಂತವಾದುದು.
ತುಳುವರ ನೆಲದ ಸಂಸ್ಕøತಿಯ ಉಪಾಸನೆಯು ಮೌಖಿಕ ಪಾಡ್ದನ ಕಾವ್ಯ ಮೇಲೆ ಅವಲಂಬಿಸಿದೆ.
ತುಳುನಾಡಿನ ನೆಲದ ಸಂಸ್ಕøತಿಯ ವಿಶಿಷ್ಟ ಉಪಾಸನೆ ಭೂತಾರಾಧನೆ. ಈ ಉಪಾಸನೆಯ ಬೆನ್ನೆಲುಬು ಮೌಖಿಕ ಕಥನ ಕಾವ್ಯ. ಇವನ್ನು ರೂಢಿಯಲ್ಲಿ ಪಾಡ್ದನ ಎಂದು ಹೇಳುತ್ತಾರಾದರೂ ದೈವಾವೇಶದ ಹಾಡುಗಳನ್ನು ಸಂಧಿ, ಬೀರ ಎಂದು  ಕರೆಯುವುದು ರೂಢಿ. ಸಾಮನ್ಯವಾಗಿ ಸಂಧಿ ಮತ್ತು ಬೀರವನ್ನು ಭೂತಾರಾಧನೆಯ ಸಂದರ್ಭದಲ್ಲಿ ಶಕ್ತಿ ದೈವಗಳು ದೈವಮಾಧ್ಯಮನೊಳಗೆ ಆವಾಹನೆಗೊಳ್ಳಲು ಹಾಡುವುದು ಕಡ್ಡಾಯ ವಿಧಿ.
ಒಂದೇ ದೈವದ ಪಾಡ್ದನದ ಕಟ್ಟುವಿಕೆಯಲ್ಲಿ ಅಥವಾ ಪಾಡ್ದನದ ನಿರೂಪಣೆಯಲ್ಲಿ ವ್ಯಕ್ತಿಯಿಂದ ವ್ಯಕ್ತ್ಯಿಗೆ ಭಿನ್ನತೆÀ ಕಾಣಬಹುದು. ಆದರೆ ಒಟ್ಟು ಆಶಯದಲ್ಲಿ ಬದಲಾವಣೆ ಮಾಡುವ ಸ್ವಾತ್ತಂತ್ರ್ಯವನ್ನು ಪಾಡ್ದನಕಾರರು ತೆಗೆದುಕೊಳ್ಳುವುದಿಲ್ಲ. ರಾಮಾಯಣ-ಮಹಾಭಾರತವನ್ನು ಕವಿಗಳು ತಮ್ಮ ಸೃಜನಶೀಲತೆಗೆ ಬಗ್ಗಿಸಿಕೊಂಡಂತೆ ಕಥೆಯಲ್ಲಿ ಬದಲಾವಣೆ ಮಾಡಿಕೊಂಡಂತೆ ತುಳು ಮೌಖಿಕ - ಉಪಾಸನಾ ಕಥನ ಗೀತಗಳನ್ನು ಬಗ್ಗಿಸಲಾಗುವುದಿಲ್ಲ. ಇಲ್ಲಿ ದೈವ ಭಯ ಇದೆ.
-ಮೂಲತಾನದ ನಾಗಬ್ರಹ್ಮ  ಮತ್ತು  ಪರಿವಾರ ದೈವಗಳ ಸಂಧಿ / ಪಾಡ್ದನ. ಅಧ್ಯಾಯ 1 ಪುಟ1(ಜಾನಪದ ವಿಶ್ವ ವಿದ್ಯಾಲಯ ಗೊಟಗೋಡಿ ಹಾವೇರಿ 2014)